Tuesday 7 April 2009

ನೀನು ನೀನಾಗಿರು

ಗೆಳತಿ,
ಕಳೆದೆರಡು ದಿನದಿಂದ ನಾನು ನಿನ್ನ ಪತ್ರವನ್ನು ಜೊತೆಯಲ್ಲಿ ಇಟ್ಟುಕೊಂಡು ಮೌನವಾಗಿ ಕುಳಿತು ಬಿಟ್ಟಿದ್ದೇನೆ.ಏನು ಮಾಡೋದಕ್ಕೂ ಹೊಳಿತಾ ಇಲ್ಲ.ಅಷ್ಟು ಜಡತ್ವ.ನಿನ್ನ ಪರಿಸ್ಥಿತಿಯನ್ನು ನಾನು ಊಹಿಸಿಕೊಳ್ಳಬಲ್ಲೆ.ನಿನ್ನ ದುಃಖ ನನಗೆ ಅರ್ಥ ಆಗಿದೆ.ತಕ್ಷಣ ಬಂದು ನಿನ್ನ ಕಣ್ಣೀರನ್ನು ಒರೆಸುವ ಆಸೆ ಆದರೆ ನಾನು ಹೆಲ್ಪ್ ಲೆಸ್.ನನ್ನ ಕೆಲಸದ ರೀತಿಯೇ ಅಂತಹುದು.ಸಿಯಾಚಿನ್ ಗಡಿಯಲ್ಲಿ ನಾನು ಕರ್ಣಾಟಕದ ಮೂಲೆಯಲ್ಲಿ ನೀನೂ,ಆದರೆ ಮನಸ್ಸುಗಳಿಗೆ ಅಂತರ ಇದೆಯಾ?ನಿನ್ನ ಪ್ರೀತಿ ಒಡೆದು ಹೋಯ್ತು ಅಂತ ಬರೆದಿದ್ದಿಯಲ್ಲ ಆ ಅಂಶವೇ ನನ್ನನ್ನು ಕಂಗಾಲು ಮಾಡಿದೆ.ಅವನನ್ನು ಅದೆಷ್ಟು ಪ್ರೀತಿಸ್ತಾ ಇದ್ದೆ,ನಿನ್ನ ಪತ್ರದ ಒಂದೊಂದು ಅಕ್ಷರ ಈಗಲೂ ಅವನನ್ನು ಮರೆತಿಲ್ಲ ಅಂತ ಹೇಳ್ತಾ ಇದೆ.ನಿಜವಾ? ಮರೆಯೋದು ಸುಲಭ ಅಲ್ಲ ಅಂತ ನಂಗೆ ಗೊತ್ತು,ಗೆಳತಿ ನೀನೂ ಇನ್ನು ಅವನನ್ನು ಪ್ರೀತಿಸ್ತಾನೆ ಇದ್ದೀಯ ಹಾಗಂತ ನಂಗೆ ಈ ಪತ್ರ ಓದಿದಾಗ ಪದೇಪದೆ ಮನಸ್ಸಿಗೆ ಹೊಳೆದಿದೆ. ನಿಜವಾ ? ಯಾಕೋ ಗೊತ್ತಿಲ್ಲ ಏನು ಹೇಳ ಬೇಕು ಅಂತ ತೋಚ್ತಾನೆ ಇಲ್ಲ.ನಿನಗೆ ಮೋಸ ಮಾಡಿದ ಆ ನಿನ್ನ ಹಳೆಯ ಮಧುರ ನೆನಪಾದ ಅವನನ್ನು ಎಲ್ಲರ ಮುಂದೆ ಕ್ರೂರವಾಗಿ ನಿಂದಿಸ ಬೇಡ ಕಣೆ ಪ್ಲೀಸ್,ನೀನೂ ಇಷ್ಟು ದಿನ ಪ್ರಾಂಜಲವಾಗಿ ಪ್ರೀತಿಸಿದ್ದಕ್ಕೆ ಅವಮರ್ಯಾದೆ ಮಾಡಿದಂತೆ ಆಗುತ್ತದೆ.ನಿನ್ನಂತಹ ಅಪರೂಪದ ರತ್ನ ಪಡೆಯಲು ಆತನಿಗೆ ಲಕ್ ಇಲ್ಲ .ನೀನೂ ಅವನನ್ನು ಪ್ರೀತಿಸು ಅಂತ ಹೇಳಲ್ಲ,ದ್ವೇಷಿಸೋದು ಬೇಡ ಅಂತ ಹೇಳೋಕೆ ಇಷ್ಟ ಪಡ್ತೀನಿ .ಕ್ರೂರಿ ಅಂತ ತಿಳಿ ಬೇಡವೆ... ನೀನೂ ಎಲ್ಲರಿಗಿಂತ ಭಿನ್ನ ಅಂತ ಅವನು ಸಾಕಷ್ಟು ಸರ್ತಿ , ನನ್ನ ಮುಂದೆ ಅನೇಕರು ಹೇಳಿದ್ದಾರೆ,ಯಾವುದೋ ಒಬ್ಬ ವ್ಯಕ್ತಿಗಾಗಿ ನಿನ್ನತನ ಬಿಡಬೇಡ....!ತುಂಬಾ ಕ್ರೂರಿ ಅಥವಾ ಗಂಡಸರೆಲ್ಲ ಒಂದೇ ಅಂತ ಹೇಳ ಬೇಡ ... ನನಗೆ ನೀನೂ ನೀನಾಗಿರೋದು ಮುಖ್ಯ,ನೀನೂ ಎಂದಿಗೂ ನಿನ್ನಂತೆ ಇರಬೇಕು ಅದೇ ನನ್ನ ಆಸೆ.ಬರೆಯೋಕೆ ತೋಚ್ತಾ ಇಲ್ಲ ಕಣೆ .ಯೋಚಿಸು.. ದುಡುಕ ಬೇಡ
ನಿನ್ನ ಗೆಳೆಯ

Friday 3 April 2009

ರಾಮ ಎಂಬುವ ಎರಡು...

ರಾಮಾಯಣದಲ್ಲಿ ರಾಮನಿಗಿಂತ ಹೆಚ್ಚು ಪ್ರಭಾವಶಾಲಿ ಆಗಿರುವುದು ರಾಮ ನಾಮ ಅಂತ ತಿಳಿದೋರು ಹೇಳುತ್ತಾರೆ.ನಮ್ಮಲ್ಲೂ ಅದರ ಬಗ್ಗೆ ಅನೇಕ ಕೀರ್ತನೆಗಳುಜಾರಿಯಲ್ಲಿವೆ .'ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರೈಯ್ಯ'ಹೀಗೆ ಆರಂಭಗೊಂಡ ಹಾಡು ರಾ ಅಕ್ಶರದ ಮಹಿಮೆಯಿಂದ ಹೇಳುತ್ತಾ ಹೋಗುತ್ತದೆ.ಅದೇ ರೀತಿ ನಾವು 'ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠಲ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ 'ಅಂತಲೂ ಹಾಡಿದ್ದೆವು ಹಾಗು ಹಾಡುತ್ತಲು ಇದ್ದೇವೆ.ಅಂದ್ರೆ ರಾಮ ಅನ್ನುವ ವ್ಯಕ್ತಿಗಿಂತ ಆತನ ನಾಮ ಎಷ್ಟು ಪ್ರಾಮುಖ್ಯತೆ ಪಡೆದಿದೆ ಅಂತ ಆಯ್ತಲ್ಲ.'ಶ್ರೀ ರಾಮ ಕೇವಲ ಅಯೋಧ್ಯ ಅಳಿದರೆ ರಾಮನಾಮ ಇಡಿ ಲೋಕವನ್ನು ಅಳುತ್ತದೆ'ಎಂದು ಸ್ವಯಮ್ ಹನುಮಂತ ಹೇಳಿರುವುದಾಗಿ ರಾಮಾಯಣದಲ್ಲಿ ಉಲ್ಲೇಖ ಮಾಡಿದೆ.ಈ ರಾಮ ಅನ್ನುವ ಎರಡು ಅಕ್ಷರ ಯಾವುದರಿಂದ ಪಡೆಯಲಾಗಿದೆ ಅನ್ನುವ ಅಂಶವು ತುಂಬಾ ಆಸಕ್ತಿದಾಯಕ ಆಗಿದೆ."ಓಂ ನಮೋ ನಾರಾಯಣಾಯ" ಎನ್ನುವ ಅಷ್ಟಾಕ್ಷರಿ ಮಂತ್ರದಲ್ಲಿನ 'ರಾ' ಎನ್ನುವ ಐದನೇ ಅಕ್ಷರವನ್ನು ಹಾಗು 'ಓಂ ನಮಶಿವಾಯ' ಎನ್ನುವ ಪಂಚಾಕ್ಷರಿ ಮಂತ್ರದಲ್ಲಿ 'ಮ' ಅಕ್ಷರ ತೆಗೆದು ಕೊಳ್ಳಲಾಗಿದೆ.ಅಂದರೆ ರಾಮ 'ಶಿವಕೇಶವರ 'ಏಕೀಕೃತ ಮೂರ್ತಿ.ಹೀಗೆ ಅನೇಕ ರೀತಿಯಲ್ಲಿ ಭಗವಂತನ ಬಗ್ಗೆ ಹೇಳುತ್ತಾರೆ ಭಕ್ತರು.ಏಕ ಪತಿ ವ್ರತಸ್ಥ ಅಂತ ಹೇಳುತ್ತಾರೆ,ಆದರೆ ಇನ್ನೊಬ್ಬ ಲೇಖಕರ ಅನ್ವಯ ಆತನ ತಂದೆ ದಶರಥನಿಗೆ ಸ್ವಲ್ಪ ಸ್ತ್ರೀ ಮೋಹ ಅದನ್ನು ಕಣ್ಣಾರೆ ಕಂಡು ಆತ ಏಕ ಪತ್ನಿ ವ್ರತಕ್ಕೆ ಬದ್ಧನಾದ ಅಂತಾರೆ.ಅದೆಷ್ಟು ನಿಜವೋ ಗೊತ್ತಿಲ್ಲ! ಏನೇ ಆದರು ನಾರ್ತ್ ಇಂಡಿಯನ್ ರಾಮ ದಕ್ಷಿಣವನ್ನು ಹಾಗು ಸೌತ್ ಇಂಡಿಯನ್ ಹನುಮ ಉತ್ತರವನ್ನು ಆಳ್ತಾ ಇರೋದು ಮಾತ್ರ ಸೋಜಿಗದ ಸಂಗತಿ.ಇನ್ನೊಂದು ವಿಷಯ ರಾಮ ಅಂದರೆ ಕನ್ನಡದಲ್ಲಿ 'ಪ್ರಿಯ'ಅನ್ನುವ ಅರ್ಥ ಬರುತ್ತದೆ.ರಾಮ ಆದ್ದರಿಂದಲೇ ಎಲ್ಲ ಕಾಲಕ್ಕೂ ಎಲ್ಲರಿಗೆ ಹೇಗೋ ಅಂತು ಪ್ರಿಯ ತುಂಬ ಪ್ರಿಯ!

Followers