Friday 21 August 2009

ಜೈ ಜೈ ಗಣೇಶ!



ಪ್ರಥಮ ಸಮೀರ ಶ್ರೀ ಗಣೇಶಂ ಗೌರಿಸುತ ಪ್ರಿಯ ಮಹೇಶಂ....! ನಮ್ಮ ಧರ್ಮದಲ್ಲಿ ಅದೆಷ್ಟೇ ದೇವರಿದ್ದರು ನಾವು ಮೊದಲು ಪೂಜಿಸುವುದು ಗಣಪನನ್ನು.ಶುಭಕಾರ್ಯ ಆಗಿರಲಿ ಎಲ್ಲದಕ್ಕೂ ನಮ್ಮ ವಿನಾಯಕ ಇರಲೇ ಬೇಕು.ಪುರಾಣಗಳಲ್ಲೂ ಈತನಿಗೆ ವಿಶೇಷ ಸ್ಥಾನ.ಏಕದಂತ,ಮೂಷಿಕ ವಾಹನ,ಕೈಲ್ಲಿ ಪಾಶಂಕುಶ, ಕಡಬು,ಸ್ಥೂಲ ಹೊಟ್ಟೆ ,ಅದಕ್ಕೆ ಸುತ್ತಿರುವ ಹಾವು,ಆನೆ ಮುಖ....! ಮನುಷ್ಯ ಸಮಾಜ ಹೆಚ್ಚು ಹೆಚ್ಚು ಆದ್ಯತೆ ಕೊಡುವ ಯಾವ ಅಂಶವು ಗಣಪನಲ್ಲಿ ಇಲ್ಲ ಆದರು ಈತ ಹೆಚ್ಚು ಪ್ರಖ್ಯಾತ.ವಿಶ್ವಮಾನ್ಯ.ವಿಶ್ವದೆಲ್ ಗಣೇಶನ ಮೂರ್ತಿ,ಚಿತ್ರಪಟಗಳಿಗಿರುವ ಡಿಮ್ಯಾಂಡ್ ಬೇರ್ಯಾವ ಪ್ರಸಿದ್ಧ ದೇವರಿಗೂ ಇಲ್ಲ.ಪುರಾಣದತ್ತ ಸ್ವಲ್ಪ ಗಮನ ಹರಿಸಿದಾಗ -ಈತ ಪ್ರುಥ್ವಿತತ್ವ ಹೊಂದಿರುವ ದೇವ,ಅಂದ್ರೆ ನಮ್ಮ ಗಣಪ ಹುಟ್ಟಿದ್ದು ಪಾರ್ವತಿ ಲೆಪಿಸಿಕೊಂಡಿದ್ದ ಹಿಟ್ಟಿನ ಲೇಪನದಿಂದ.ಆದ್ದರಿಂದಲೇ ಮಣ್ಣಿನ ಗಣಪ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ನಮ್ಮಲ್ಲಿ ಬೇರೂರಿದೆ.ಈತನಿಗೆ ಕೆಂಪು ಬಣ್ಣ ಅಂದ್ರೆ ಪ್ರಾಣ.ಧರಿಸುವ ಬಟ್ಟೆ,ಆಭರಣ,ಪೂಜಿಸುವ ಪುಷ್ಪ ಎಲ್ಲವು ಕೆಂಪು ಕೆಂಪು! ಈತನ ವ್ರತ ಮಾಡ ಬಯಸುವವರು ಕೆಂಪು ವಸ್ತ್ರ ಧರಿಸಿ ಮಾಡಿದರೆ ಹೆಚ್ಚು ಪ್ರಯೋಜನ ಅಂತಾರೆ ತಿಳಿದವರು.ಈತ ಪತ್ರೆ ಪ್ರಿಯ,ಇದರ ಬಗ್ಗೆ ವಿವರವಾಗಿ ನೋಡಲು ಹೋದರೆ ತಿಳಿದುಬರುವ ಸಂಗತಿ ಎಲೆಗಳು ಆರೋಗ್ಯದ ದೃಷ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ.ದತ್ತೂರ,ಮಾಚಿ,ಬಿಲ್ವ...! ಚರ್ಮರೋಗಗಳನ್ನು,ಶ್ವಾಸ ಕೋಶದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಪಡೆದಿರುವ ಪತ್ರೆಗಳಾಗಿದೆ.ಆನೆ ಕಾಡಲ್ಲಿ ವಾಸ ಮಾಡುವ ಪ್ರಾಣಿ ಅದಕ್ಕೆ ಮೇಲೆ ತಿಳಿಸಿರುವ ಎಲೆಗಳು ಸುಲಭವಾಗಿ ದೊರೆಯುತ್ತದೆ,ಆದರೆ ತುಳಸಿ ಪಾಪ ಆನೆಗೆಲ್ಲಿ ಸಿಗುತ್ತೆ ,ಆದ್ದರಿಂದಲೇ ಇರಬೇಕು ಗಣಪನಿಗೆ ತುಳಸಿಪತ್ರೆ ಅಂದ್ರೆ ಅಷ್ಟಕಷ್ಟೇ! ಗರಿಕೆ,ತರ್ಪಣ,ಮೋದಕ.....!ಈತನಿಗೆ ಪ್ರಿಯ.
ಗಣೇಶ ಸಾರ್ವಜನಿಕ ದೇವರು.ಎಲ್ಲ ಜಾತಿ ವರ್ಗಗಳಿಗೆ ಮಾತ್ರವಲ್ಲ ಮಾತ್ರವಲ್ಲ ಭಿನ್ನಧರ್ಮಗಳಿಗೂ ಈತ ಪ್ರಿಯ.
ಒಂದು ಸಿದ್ಧಾಂತದ ಪ್ರಕಾರ ಆನೆ ತಲೆ ಅಧಿಕಾರದ ಸಂಕೇತ.ಆಗಿನ್ನೂ ಭಾರತವನ್ನು ಬುಡಕಟ್ಟು ಜನಾಂಗದವರು ಆಳ್ತಾ ಇದ್ದ ಕಾಲ.ಆ ಸಂದರ್ಭದಲ್ಲಿ ಒಂದಷ್ಟು ದಾಳಿಕೋರರು ಭಾರತದ ಕಡೆ ಬಂದು ಇಲ್ಲಿದ್ದ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡಿ ಆ ಪ್ರಾಂತ್ಯ ಗೆದ್ದರು,ಅವರು ಹೋಗುವ ಮುನ್ನ ಆನೆ ತಲೆ ಇರುವ ಮುಖವಾಡ ಊರ ಮಧ್ಯದಲ್ಲಿ ಇಟ್ಟು ತಮ್ಮ ಪರವಾಗಿ ಇದಕ್ಕೆ ಮರ್ಯಾದೆ ಸಲ್ಲಿಸಬೇಕು ಎಂದು ತಿಲಿಸೋದರಂತೆ.ಹೀಗೆ ಅನೇಕ ಸ್ಥಳಗಳಲ್ಲಿ ಆನೆಯ ಮುಖವಾಡ ಪ್ರತಿಷ್ಟಾಪಿಸಿ ನಂತರ ಹೊರತು ಹೋದರಂತೆ.ಅಂದಿನಿಂದ ಅಲ್ಲಿ ವಾಸ ಮಾಡುತ್ತಾ ಇದ್ದ ಜನರು ಆ ಮುಖವಾಡಕ್ಕೆ ಗೌರವ ಸಲ್ಲಿಸುತ್ತ ಬಂದರಂತೆ.ಹೀಗೆ ಗಣೇಶನ ಹುಟ್ಟು ಆಯ್ತು ಅಂತಾರೆ.ವಿಷಯ ಏನೇ ಇರಲಿ ಈತ ಎಲ್ಲರಿಗೂ ಪ್ರಿಯನಾದ ದೇವರು.ನನಗಂತೂ ಅತ್ಯಂತ ಆಪ್ತನಾದ ದೇವ.ನನ್ನ ಅತಿ ಮೆಚ್ಚಿನ ದೇವ ಈತ.ಜೈ ಜೈ ಗಣೇಶ!


Thursday 13 August 2009

ಬಾಂಧವ್ಯ ಗಟ್ಟಿ

ಚಿಕ್ಕಂದಿನಲ್ಲಿ ಕೇಳಿದ ಕಥೆ.ಇಷ್ಟವಾದ ಅನೇಕ ಕಥೆಗಳಲ್ಲಿ ಇದೂ ಒಂದು.ಕೆಲವು ಕಥೆಗಳೇ ಹಾಗೆ ಮನದಲ್ಲಿ ಸದಾ ನಳ ನಳಿಸುತ್ತಲೇ ಇರುತ್ತದೆ.ಬಿಡದ ಬಾಂಧವ್ಯ!
ಕೃಷ್ಣ ಸಾಮಾನ್ಯವಾಗಿ ಎಲ್ಲರು ಮೆಚ್ಚುವ ದೇವ.ಆತನ ಲೀಲೆಗಳು ಅಪಾರ.ಶ್ರೀಕೃಷ್ಣನ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ.ಕೆಲವು ಗೊತ್ತು ,ಒಂದಷ್ಟು ಹೀಗೆ ಜನಪದ ಸಾಹಿತ್ಯ.ಪ್ರಾಯಶ: ಇದು ಜನಪದ ಕಥೆ ಇರಬಹುದು ಅಂತ ಕಾಣುತ್ತೆ.ಇರ್ಲಿ ಈಗ ಆ ವಿಷ್ಯ ಅಪ್ರಸ್ತುತ.
ಹೀಗೊಂದೂರು.ಅಲ್ಲಿ ಒಬ್ಬ ಬಡವ ವಾಸ ಮಾಡ್ತಾ ಇದ್ದ.ಆತ ಕೃಷ್ಣ ಭಕ್ತ. ಒಪ್ಪತ್ತು ಗಂಜಿಗೂ ಪರದಾಟ! ಅಂತಹ ವ್ಯಕ್ತಿ ಕಷ್ಟಪಟ್ಟು ದುಡೀತಾ ಇದ್ದ.ಅಕಸ್ಮಾತ್ ಹಣ ಸಿಕ್ಕರೆ ಅದನ್ನು ದಾನ ಮಾಡಿ ಬಿಡುವ ವ್ಯಕ್ತಿತ್ವ.(ಆ ರೀತಿಯ ವ್ಯಕ್ತಿಗಳು ಈಗಿನ ಕಾಲಕ್ಕೆ ಖಂಡಿತ ಹೊಂದಲ್ಲ ಆ ಮಾತು ಬೇರೆ!) .ಆ ಊರಲ್ಲಿ ಇರುವ ಹಣವಂತರು ಕೃಷ್ಣನ ಭಕ್ತರು.ಅವರು ಆ ಕೃಷ್ಣ ಪರಮಾತ್ಮ ಬ್ಯಾಡ ಅಂತ ಅಂದ್ರೂ ಕೇಳದೆ ಯಥೇಚ್ಛವಾಗಿ ನೈವೇದ್ಯಗಳ ಅರ್ಪಣೆ! ಸಮಾಜ ಇರೋದು ಹಾಗೆ ಅಲ್ವ ಬಡ ಮಕ್ಕಳಿಗೆ ಮನೆಯಲ್ಲಿ ಇರೋ ಚಾಕಲೇಟ್ ಕೊಡೋಕೂ ಇಷ್ಟ ಪಡದ ಜನ ಸಿರಿವಂತ ಮಗುವಿಗೆ ಪಿಜ್ಜಾ ತಗೋ ಬರ್ಗರ್ ತಗೋ...! ಅಂತ ಕಾಡಿಸೋದು. ಆ ಕಾಲದಲ್ಲಿ ಪ್ರತಿ ಕೃಷ್ಣಾ ಷ್ಟಮಿಗೂ ಕೃಷ್ಣಪ್ಪ ರಾತ್ರಿ ಭಕ್ತರ ಮನೆಗೆ ಬಂದು ಸ್ವಲ್ಪ ಸ್ವಲ್ಪ ತಿಂಡಿ ತಿನಿಸು ಸ್ವೀಕರಿಸ್ತಾ ಇದ್ದನಂತೆ.ಈ ಬಡವನ ಮನೆಗೆ ಒಂದು ಸರ್ತೀನಿ ಬಂದೆ ಇರಲಿಲ್ಲವಂತೆ.ಈತನ ಪ್ರಿಯ ಪತ್ನಿ ಸತ್ಯಭಾಮಗೆ ಈ ವಿಷ್ಯ ಸಿಟ್ಟು ತರಿಸಿತು,ಅಲ್ಲ ಸ್ವಾಮಿ ನೀನು ಹೀಗೆ ಭಕ್ತಿಗಿಂತ ದುಡ್ಡಿನ ಮುಖ ನೋಡ್ತೀಯಲ್ಲ! ಈ ನಿನ್ ಗುಣ ನನಗೆ ಸ್ವಲ್ಪವೂ ಇಷ್ಟ ಆಗಲಿಲ್ಲ ಅಂತ ಹೇಳಿದಳು.ಆ ಆ ಜಗನ್ನಾಟಕ ಸೂತ್ರಧಾರಿ ನಗುತ್ತ 'ಸತ್ಯ ಆತನ ಮನೆಗೆ ಹೋಗಲು ಕಾಲ ಕೂಡಿ ಬರ ಬೇಕು,ನಾನು ಆತನ ಭಕ್ತಿಯನ್ನು ಪ್ರಪಂಚಕ್ಕೆ ತಿಳಿಸಿ ಹೇಳಬೇಕು ,ಅದಕ್ಕಾಗಿ ಇಷ್ಟು ತಡ ಮಾಡ್ತಾ ಇರೋದು' ಅಂತ ಹೇಳಿ ಬಾಯ್ಮುಚ್ಚಿಸಿದನಂತೆ.ಕೃಷ್ಣ ಹೇಳಿದ ಕಾಲವು ಬಂತು ಆತ ತನ್ನ ಜನ್ಮದಿನದಂದು ಆ ಊರಿಗೆ ಹೋದನಂತೆ.ಎಲ್ಲರ ಮನೆಯಲ್ಲಿಯೂ ತಿಂಡಿ ತಿಂದ ಬಳಿಕ ಆತನಿಗೆ ಬಾಯಾರಿಕೆ ಆಯ್ತಂತೆ.ನೀರನ್ನು ಹುಡುಕುತ್ತ ಹೋದಾಗ ಈ ಬಡವನ ಗುಡಿಸಿಲು ಸಿಕ್ಕಿತಂತೆ,ಪಾಪ ಹೇಳಿಕೇಳಿ ಬಡವ ಈತ,ನೀರನ್ನು ನೈವೇದ್ಯವಾಗಿ ಇಟ್ಟಿರುತ್ತಾನೆ.ಅದನ್ನು ಕಂಡು ಕೃಷ್ಣನಿಗೆ ಸಂತೋಷದಿಂದ ಕುಣಿದಾಡುವಂತೆ ಆಯ್ತಂತೆ.ತಕ್ಷಣ ದೇವನು ನೀರೆತ್ತಿ ಗಟಗಟನೆ ಕುಡಿದು ತನ್ನ ಭಕ್ತನನ್ನು ಆಶೀರ್ವದಿಸಿದನಂತೆ .ಮಾರೆಯ ದಿನ ಈ ಬಡವ ಶ್ರೀಮಂತನಾಗಿದ್ದ.ಊರಿನವರಿಗೆ ಆಶ್ಚರ್ಯ !ಅವರು ಕಾರಣ ಕೇಳಿದಾಗ ತಾನಿತ್ತ ನೀರು ಕೃಷ್ಣನಿಗೆ ಪ್ರಿಯವಾಗಿ ಆತ ನೀಡಿದ ವರದಿಂದ ತಾನು ಶ್ರೀಮಂತನಾದೆ ಅಂತ ಖುಷಿಯಿಂದ ಹೇಳಿದ ಆ ಭಕ್ತ.ಮತ್ತೊಂದು ವರ್ಷ ಬಂತು.ಪುನಃ: ಆ ಕೃಷ್ಣ ಆ ಊರಿಗೆ ಬಂದ ರಾತ್ರಿ ಎಲ್ಲರು ಮಲಗಿದ್ದರೆ,ಆದರೆ ಪ್ರತಿಯೊಬ್ಬ ಭಕ್ತ ನೈವೇದ್ಯಕ್ಕೆ ನೀರನ್ನು ಇಟ್ಟಿದ್ದ! ಪಾಪ ಚಕ್ಕುಲಿ ,ಕೋಡುಬಳೆ ನಿರೀಕ್ಷಿಸಿ ಬಂದಿದ್ದದ ದೇವರಿಗೆ ನೀರು ಕುಡಿದೂ...ಕುಡಿದೂ...! ಸಾಕಾಯ್ತಂತೆ.ಕೊನೆಗೆ ಅದೇ ಕಳೆದ ಬಾರಿ ಸಿರಿವಂತಿಕೆ ನೀಡಿದ್ದ ಆ ಭಕ್ತನ ಮನೆಗೆ ಬಂದಾಗ ಆತ ಸಿಕ್ಕಾಪಟ್ಟೆ ,ವಿಧ ವಿಧ ತಿನಿಸುಗಳನ್ನು ಮಾಡಿ ನೈವೇದ್ಯಕ್ಕೆ ಇಟ್ಟಿದ್ದನಂತೆ.ಕೃಷ್ಣನಿಗೆ ಖುಷಿ ತಡಿಯಲಾಗದೆ ಅಲ್ಲಿ ತಿಂಡಿಗಳನ್ನು ಒಂದು ಬಿಡದೆ ಮುಗಿಸಿ ಇನ್ನೂ ಜಾಸ್ತಿ ಉದ್ದಾರ ಆಗು ಅಂತ ಹರಿಸಿ ಮಾಯ ಆದನಂತೆ.ಮಾರನೆಯ ದಿನ ಈ ಭಕ್ತ ಮತ್ತೂ ಶ್ರೀಮಂತ ಆಗಿದ್ದ.ಇದೆಲ್ಲ ಹ್ಯಾಗಾಯ್ತಪ್ಪ ಅಂತ ಊರವರು ಕೇಳಿದರು.ಆಗ ಆತ 'ಅಯ್ಯಗಳಿರ! ದೇವರು ನಿಮಗೆ ಶ್ರೀರಕ್ಷೆ ಮಾಡೇ ಇದ್ದದ.ನೀವು ಆತ ಇನ್ನು ಕೊಡಲಿ,ಮತ್ತೂ ನೀಡಲಿ ಅಂತ ಆಶಿಸಿದಿರಿ.ಅದು ತಪ್ಪಲ್ಲ.ನೀವು ಯಾರಿಂದಲಾದರೂ ಪಡೆದರೆ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳ ಬೇಕು.ನಿಜ ದೇವರಿಗೆ ಕೊಡಲು ನಾವ್ಯಾರು? ಆ ನಮಗೆ ನೀಡಿದ ಸವಲತ್ತುಗಳ ಬಗ್ಗೆ ನಮಗೆ ಆದಾಗಲೆಲ್ಲಾ ತಪ್ಪದೇ ಕೃತಜ್ಞತೆಯನ್ನು ತಿಳಿಸಬೇಕು,ಅದೂಉತ್ತಮಗುಣಗಳಲ್ಲಿ ಒಂದು.ಆಗಷ್ಟೆ ದೇವರೂ ಸೇರಿದಂತೆ ಮನುಷ್ಯರ ನಡುವೆಯೂ ಸಹ ಬಾಂಧವ್ಯ ಗಟ್ಟಿಆಗುವುದು ಎಂದನಂತೆ ಆ ಭಕ್ತ.

Saturday 8 August 2009

ಮರ್ತೆ ಹೋಗಿದ್ದೆ




ನನಗೆ ಬಂದ ಮೇಲ್ಗಳಲ್ಲಿ ಇಷ್ಟ ಆಗಿದ್ದುಮಧ್ಯಪ್ರಾಚ್ಯ ದೇಶಗಳಿಗೆ ಕೊಕೊಕೊಲ ಮಾರುವ ಅಸೈನ್ ಮೆಂಟ್ ಒಬ್ಬನಿಗೆ ಸಿಕ್ತು.ಕೆಲವು ದಿನಗಳಾದ ಬಳಿಕ ಆತ ಹ್ಯಾಪ್ ಮೊರೆ ಹಾಕಿಕೊಂಡು ಹಿಂತಿರುಗಿದ.ತುಂಬಾ ಬುದ್ಧಿವಂತನಾಗಿದ್ದ ಗೆಳೆಯ ಈ ಅಸೈನ್ ಮೆಂಟ್ನಲ್ಲಿ ಸೋತದ್ದೇಕೆ ಎಂದು ಗೊಂದಲ ಉಂಟಾಯಿತು ಗೆಳೆಯನಿಗೆ,ಸರಿ ಅವನನ್ನು ಭೇಟಿ ಮಾಡಲು ಹೋದ ಗೆಳೆಯ, ಇಬ್ಬರು ಸ್ವಲ್ಪ ಕಾಲ ಮಾತಾಡಿದ ಬಳಿಕ ನೀನು ಸೋತಿದ್ದೇಕೆ ಅಂತ ಕೇಳಿದ.ಆಗ ಅಸೈನ್ ಮೆಂಟ್ ತೆಗೆದು ಕೊಂಡಿದ್ದ ವ್ಯಕ್ತಿ ಹೇಳಿದ್ದು ಇಷ್ಟೇ,' ನಾನು ಮಧ್ಯಪ್ರಾಚ್ಯ ದೇಶಗಳಿಗೆ ಹೋದೆ ಅಲ್ವ,ನನ್ನ ವ್ಯಾಪಾರದ ತಂತ್ರದ ಬಗ್ಗೆ ತುಂಬ ಆತ್ಮವಿಶ್ವಾಸ ಇಟ್ಟು.ಅಲ್ಲಿ ಕೋಕೋ ಕೊಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.ಆದರೆ ನನಗೆ ಅರೇಬಿಕ್ ಭಾಷೆ ತಿಳಿದಿರಲಿಲ್ಲವಲ್ಲ,ನನ್ನ ತಲೆ ಓಡಿಸಿದಾಗ ಯೋಜನೆಯೊಂದು ಹೊಳೆಯಿತು,ಸರಿ ನಾನು ಹೇಳಬೇಕಾದ್ದನ್ನು ಪೋಸ್ಟರ್ ಮೂಲಕ ತಿಳಿಸುವುದೆಂದು ನಿಶ್ಚಯಿಸಿದೆ.'
1-ಪೋಸ್ಟರ್ -ಬಿಸಿಯಾದ ಹಬೆಯಿಂದ ಕೂಡಿದ ಮರುಭೂಮಿಯಲ್ಲಿ ಸುಸ್ತಾಗಿ ಒಬ್ಬ ಮನುಷ್ಯ ಬಿದ್ದಿದ್ದ.
2-ಪೋಸ್ಟರ್ -ಆ ಮನುಷ್ಯ ನಮ್ಮ ಕೊಕೊಕೊಲ ಕುಡಿದ
3-ಪೋಸ್ಟರ್ -ಬಳಿಕ ಆತ ಸಂಪೂರ್ಣವಾಗಿ ಗುಣಮುಖನಾಗಿ ಉಲ್ಲಾಸದಿಂದ ಹೊರಟ.
ಇಷ್ಟು ಹೇಳಿ ಆ ಸೇಲ್ಸ್ ಮ್ಯಾನ್ ನಿಟ್ಟುಸಿರುಬಿಟ್ಟ ,ಆಗ ಅವನ ಗೆಳೆಯ 'ಇದರಲ್ಲೇನು ತಪ್ಪಿದೆ' ಅಂತ ಕೇಳಿದ.ಆಗ ಆತ 'ಅಲ್ಲೇ ಮಹರಾಯ ನಾನು ತಪ್ಪಿದ್ದು ಅರಬರು ಬಲ ಭಾಗದಿಂದ ಎಡಭಾಗ ಓದುತ್ತಾರೆ ಅನ್ನುವ ವಿಷಯ ನಾನು ಮರ್ತೆ ಹೋಗಿದ್ದೆ'

ಪ್ಲಟೊನಿಕ್ ಲವ್

ಗೋಪಿಕೆಯರಿಗೆ ಕೃಷ್ಣನ ಮೇಲಿರುವ ಪ್ರೀತಿ ಅಲೌಕಿಕವಾದುದು ಹಾಗೂ ದಿವ್ಯವಾದುದು.ಅಷ್ಟೊಂದು ಸಂಖ್ಯೆಯ ಗೋಪಿಕೆಯರು ಶ್ರೀಕೃಷ್ಣ ದೇವರು ಎನ್ನುವ ಸಂಗತಿ ತಿಳಿದಿತ್ತು.ಆದ ಕಾರಣ ಅವರು ತಮ್ಮ ಪ್ರೀತಿಯನ್ನು ಆತನಿಗೆ ಧಾರೆ ಎರೆದರು ಎಂದು ಭಕ್ತಿಸೂತ್ರದಲ್ಲಿ ನಾರದ ಮಹರ್ಷಿ ವಿವರಿಸಿದ್ದಾರೆ.ಅಲೌಕಿಕ  ರೀತಿಯಿಂದ ಪ್ರೀತಿಸುವುದಕ್ಕೂ ಹಾಗೂ ಲೌಕಿಕ ಪ್ರೇಮಕ್ಕೂ ನಡುವೆ ಇರುವ ವ್ಯತ್ಯಾಸದ ಬಗ್ಗೆಯೂ ಇದರಲ್ಲಿ ತಿಳಿಸಿದೆ,ಲೌಕಿಕ ಸ್ವಾರ್ಥಪೂರಿತ ,ಆದರೆ ಅಲೌಕಿಕ ನಿಸ್ವಾರ್ಥವಾದ ಪ್ರೀತಿ.ನಮಗೆ ಯಾವ ಸಂಗತಿ,ವಸ್ತು ಇಲ್ಲವೇ ಮನುಷ್ಯನಿಂದ ಸಂತಸ ಸಿಗುತ್ತದೆಯೋ ಅಂತಹವುಗಳನ್ನು ಪ್ರೀತಿಸುತ್ತೇವೆ,ಅದು ಸಹಜ ಕ್ರಿಯೆ.ಆದರೆ ಅದೇ ವ್ಯಕ್ತಿ,ಇಲ್ಲವೇ ವಸ್ತು ...ಸಂಬಂಧಿಸಿದಂತೆ ಬೇಸರ -ದುಃಖ ಉಂಟಾದರೆ ನಾವು ಅಷ್ಟು ಪ್ರೀತಿಸಿದ ವ್ಯಕ್ತಿಯನ್ನು ದ್ವೇಷಿಸುತ್ತೇವೆ,ಕೊಪಗೊಳ್ಳುತ್ತೇವೆ ಇದು ಪ್ರೀತಿಯ ಒಂದು ರೂಪವೇ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ,ಆದರೆ ಲೌಕಿಕ ಪ್ರೀತಿಯಲ್ಲಿ ಇದು ಸಾಮಾನ್ಯ,ಆದ ಕಾರಣ ಗೋಪಿಕೆಯರು ಅಲೌಕಿಕದತ್ತ ತಮ್ಮ ಗಮನ ನೆಟ್ಟರು .ಆ ಭಗವಂತನನ್ನು ಪ್ರೀತಿಸಿದರು.ಇದು ಭಗವಂತನಿಗೂ  ಗೊತ್ತು,ತನ್ನ ಬಗ್ಗೆ ಅಪಾರ ಪ್ರೀತಿ ಹೊಂದಿದ ವ್ಯಕ್ತಿಗೆ ತನ್ನ ಹೃದಯದಲ್ಲಿ ಸ್ಥಾನ ಬೇಕೇ ಹೊರೆತು ಇಂದ್ರ,ಇಲ್ಲವೇ ರಾಜ್ಯಪದವಿ ಅಲ್ಲ .ಗೋಪಿಕೆಯರು ಬಯಸಿದ್ದು ಇದೆ ಅಂಶವನ್ನು,ಅವರು ಎಂದಿಗೂ ಕೃಷ್ಣ ನು ತಮ್ಮ ಬಳಿಯಲ್ಲಿಯೇ ಇರಬೇಕು ಎಂದು ಬಯಸಲಿಲ್ಲ,ಇದೊಂತರ ಈಗಿನ ತಿಳಿದವರು ಹೇಳುವ ಪ್ಲಟೊನಿಕ್ ಲವ್ ನಂತಹುದು.
ಗೋಪಿಕ ಸ್ತ್ರೀಯರ ಪ್ರೀತಿಯ ಬಗ್ಗೆ ಹೇಳುವುದಾದರೆ-ಒಮ್ಮೆ ಶ್ರೀ ಕೃಷ್ಣನಿಗೆ ಸಿಕ್ಕಾಪಟ್ಟೆ ತಲೆನೋವು ಬಂತಂತೆ.ಎಷ್ಟು ಉಪಚಾರ ಮಾಡಿದರೂ,ಔಷಧ ನೀಡಿದರು ನೋವು ಉಪಶಮನಕ್ಕೆಬರಲೇ ಇಲ್ಲ .ಎಲ್ಲರು ಚಿಂತಿತರಾದರು,ಆಗ ಶ್ರೀಕೃಷ್ಣ ಯಾರಾದರು ತಮ್ಮ ಪಾದ ಧೂಳು ಹಣೆಗೆ ಹಚ್ಚಿದರೆ ತನ್ನ ನೋವು ದೂರವಾಗುತ್ತದೆ ಎಂದು ತಿಳಿಸಿದಾಗ ಯಾರೂ ಆ ಕೆಲಸ ಮಾಡಲು ಮುಂದೆ ಬರಲೇಇಲ್ಲವಂತೆ.ಕೃಷ್ಣನಿಗೆ ತಲೆನೋವು ವಾಸಿ ಆಗಲೇ ಇಲ್ಲ,ಆಗ ಶ್ರೀ ಕೃಷ್ಣ ತನ್ನ ಸೇವಕರನ್ನು ಗೋಪಿಕ ಸ್ತ್ರೀಯರ ಬಳಿತನ್ನ ಸೇವಕರನ್ನು ಕಳುಹಿಸಿ ಪಾದ ಧೂಳು ತರುವಂತೆ ತಿಳಿಸಿದನು .ಆಗ ಅಲ್ಲಿದ್ದ ಗೋಪಿಕೆಯರು ಈ ಸೇವೆಗೆ ಸಿದ್ಧರಾದರಂತೆ.ಆಗ ಅವರ ಜೊತೆ ಇದ್ದ ಸೇವಕ ಈ ಕ್ರಿಯೆಯಿಂದ ನೀವು ನರಕಕ್ಕೆ ಹೋಗುವುದಿಲ್ಲವೇ ಎಂದು ಪ್ರಶ್ನಿಸುತ್ತಾನಂತೆ,ಆಗ ಆ ಹೆಣ್ಣುಮಕ್ಕಳು ನಮಗೆ ಕೃಷ್ಣ ಕಷ್ಟ ಪಡೋದನ್ನು ನೋಡಲು ಆಗುವುದಿಲ್ಲ,.ನಮ್ಮ ಈ ಕೆಲಸದಿಂದ ನಾವು ನರಕಕ್ಕೆ ಹೋದರು ಚಿಂತಿಲ್ಲ, ಕೃಷ್ಣ ಹುಶಾರಾದರೆ ಸಾಕು ಎಂದುಹೇಳಿದರಂತೆ.

Thursday 6 August 2009

ಈತನ ವ್ಯಕ್ತಿತ್ವ ಅತ್ಯಂತ ವಿಶೇಷ


ಭಾರತೀಯ ಸಾಹಿತ್ಯ ಸುಂದರ ಉದ್ಯಾನವನದಲ್ಲಿ ವಿಕಸಿತ ಹೂವುಗಳು ರಾಮಾಯಣ ಹಾಗೂ ಮಹಾ ಭಾರತ ಅಂತ ತಿಳಿದವರು ಹೇಳ್ತಾರೆ.ಅದು ನೂರಕ್ಕೆ ನೂರರಷ್ಟು ಸತ್ಯ.ಈ ಹೂಗಳ ಘಮಕ್ಕೆ ಬೆಲೆಕಟ್ಟಲಾಗದು ಅಷ್ಟೇ.ರಾಮಾಯಣ ಹಾಗೂ ಮಹಾ ಭಾರತ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವದ ಜನಸಮುದಾಯಕ್ಕೆ ಮಾರ್ಗದರ್ಶಿ ಆಗಿರುವ ಮಹತ್ತರ ಗ್ರಂಥ ಅನ್ನುವವರು ಇದ್ದರೆ,ಅದು ನಿಜ! ಈ ಎರಡು ಮಹಾಗ್ರಂಥಗಳಲ್ಲಿ ಕೆಲವು ವಿಶಿಷ್ಟವಾದ ಪಾತ್ರಗಳು ಇವೆ.ರಾಮಾಯಣದ ವಿಷಯಕ್ಕೆ ಬಂದರೆ ಶತ್ರುಘ್ನ ಅತ್ಯಂತ ವಿಭಿನ್ನ ಪಾತ್ರವಾಗಿ ಕಾಣ ಸಿಗುತ್ತಾನೆ.ಈತನ ವ್ಯಕ್ತಿತ್ವ ಅತ್ಯಂತ ವಿಶೇಷ.ರಾಮಾಯಣವನ್ನು ವಿವರವಾಗಿ ಪರಿಶೀಲಿಸಿದರೆ ಶತ್ರುಘ್ನ ರಾಮನ ದಾಸರಲ್ಲಿ ಅಗ್ರಮಾನ್ಯ ಸ್ಥಾನ ಪಡೆದುಕೊಳ್ಳು ತ್ತಾನೆ.ಶತ್ರುಗಳ ಹೃದಯದ ಬಡಿತ ನಿಲ್ಲಿಸುವಶ್ತು ಪರಾಕ್ರಮಿ.ಹೇಗೆ ಲಕ್ಷ್ಮಣ ರಾಮನ ಬೆನ್ನೆಲುಬಾಗಿ ಇದ್ದನೋ ಅದೇ ರೀತಿ ಶತ್ರುಘ್ನ ಭರತನ ನ್ನೆಲುಬಾಗಿ ಇದ್ದ ಸಹೋದರ ಶತ್ರುಘ್ನ.ಅಯೋಧ್ಯಕಾಂಡ ದಲ್ಲಿ ಉಲ್ಲೇಕ ಇರುವ ಒಂದು ಪ್ರಸಂಗ "ಭಾರತ ತನ್ನ ಸೋದರ ಮಾವನ ಮನೆಗೆ ಹೋಗುವಾಗ ತನ್ನನ್ನು ಅನುಸರಿಸುತ್ತ,ಶತ್ರುಸಂಹಾರ ಮಾಡುತ್ತಾ ಶತ್ರುಘ್ನ ಪ್ರೀತಿಯಿಂದ ಕರೆದೊಯ್ದನಂತೆ".ಅಣ್ಣ ತಮ್ಮಂದಿರ ಪ್ರೀತಿಗೆ ಉತ್ತಮ ಉದಾಹರಣೆ ದಶರತ ಕುಮಾರರು.ಲಕ್ಷ್ಮಣನಿಗೆ ರಾಮ ಅತ್ಯಾಪ್ತನಾದರೆ,ಶತ್ರುಘ್ನನಿಗೆ ಭರತ ಪರಮ ಪ್ರೀತಿಪಾತ್ರ.ಈ ಅನ್ನತಮ್ಮಂದಿರಿಬ್ಬರು ಸುಮಿತ್ರೆಯ ಮಕ್ಕಳೇ!ರಾಮ ಕಾಡಿಗೆ ಹೋದ ಸಂಗತಿ ತಿಳಿದು ಅತ್ಯಂತ ದುಖಿತನಾಗಿ ಶತ್ರುಘ್ನ ಇದಕ್ಕೆ ಕಾರಣಳಾದ ಮಂಥರೆಯನ್ನು ವಧೆ ಮಾಡಲು ಹೋಗುತ್ತಾನೆ,ಆದರೆ ಸ್ತ್ರೀ ಹತ್ಯೆ ಮಹಾಪಾಪ ಎಂದು ತಡೆಯುತ್ತಾನೆ ಭರತ .ಶ್ರೀರಾಮನನ್ನು ವನವಾಸದಿಂದ ಹಿಂತಿರುಗಿ ಬರುವಂತೆ ಭರತನ ಒಡಗೂಡಿ ಒತ್ತಾಯಿಸುವ ಕೆಲಸವನ್ನು ಸಹ ಶತ್ರುಘ್ನ ಮಾಡುತ್ತಾನೆ,ಅದು ಫಲಕಾರಿ ಆಗದೆ ಭರತನ ಜೊತೆಗೂಡಿ ಅಯೋಧ್ಯೆಗೆ ಹಿಂತಿರುಗುತ್ತಾನೆ ಈತ.ಅದೇ ರೀತಿ ಶ್ರೀರಾಮ ವನವಾಸ ಮುಗಿದ ಬಳಿಕ ಆತನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡುವುದು ಸಹ ಶತ್ರುಘ್ನನೆ,
ರಾಮನ ಪಟ್ಟಾಭಿಷೇಕ ಆದ ಕೆಲವು ಕಾಲದ ಬಳಿಕ ಲವಣಾಸುರ ಎನ್ನುವ ರಾಕ್ಷಸನ ಉಪಟಳ ತಡೆಯಲಿಕ್ಕೆ ಆಗುತ್ತಿಲ್ಲ ಎನ್ನುವ ಮಹರ್ಷಿಗಳ ಮೊರೆ ಕೇಳಿ ಶ್ರೀರಾಮ ಆ ರಾಕ್ಷಸನನ್ನು ಸಂಹರಿಸುವ ಹೊಣೆ ಭರತನಿಗೆ ನೀಡಿದಾಗ,ಹದಿನಾಲ್ಕು ವರ್ಷ ಜಟಾಧಾರಿಯಾಗಿ ಕಂದಮೂಲ ಸೇವಿಸುತ್ತ ಬದುಕಿದ ಭರತನು ಈ ಕೆಲಸಕ್ಕೆ ಬೇಡ ನಾನು ಈ ಕೆಲಸ ಮಾಡುತ್ತೇನೆ ಎಂದು ಹಿರಿಯ ಅಣ್ಣನ ಬಳಿ ವಿನಯದಿಂದ ಕೇಳಿ ,ಅನುಮತಿ ಪಡೆದು ಲವಣಾಸುರನ ಸಂಹಾರ ಮಾಡುತ್ತಾನೆ.ಈ ರಾಕ್ಷಸನ ಸಂಹಾರ ಮಾಡಿದ್ದನ್ನು ಕಂಡು ಶ್ರೀರಾಮ ಈತನಿಗೆ ಆ ರಾಜ್ಯ ಆಳುವಂತೆ ಹೇಳಿದಾಗ ಇಲ್ಲ ನನಗೆ ಬೇಡ ಹಿರಿಯರು ಇರುವಾಗ ನನಗೆ ರಾಜ್ಯದ ಪಾಲನೆಯ ಅಗತ್ಯ ಇಲ್ಲ ಎಂದು ವಿನಯವಾಗಿ ತಿರಸ್ಕರಿಸುತ್ತಾನೆ ಆತ.ಕೈಗೆ ಸಿಕ್ಕ ಅಧಿಕಾರವನ್ನು ಬೇಡವೆಂದ ಶತ್ರುಘ್ನ ರಾಮನ ಬಳಿ 'ತಂದೆ ಹದಿನಾಲ್ಕುವರ್ಷ ನಿಮ್ಮ ವಿಯೋಗದಿಂದ ನಾನುಅನುಭವಿಸಿದ ದುಃಖ ಹೇಳ ತೀರದ್ದು,ಪುನಃ ಅಧಿಕಾರದ ಹೆಸರಲ್ಲಿ ನನ್ನನು ದೂರ ಮಾಡದಿರಿ ಎಂದು ಬೇಡಿಕೊಳ್ಳುತ್ತಾನೆ ಶತ್ರುಘ್ನ.ಹೀಗೆ ಬದುಕಿರುವಷ್ಟು ಕಾಲ ರಾಮನನ್ನು ಸೇವಿಸುತ್ತ ಮೋಕ್ಷ ಹೊಂದುತ್ತಾನೆ.

Followers