Saturday, 27 June 2009

ನನಗೆ ಭಯ....!

ಇದು ತುಂಬ ಹಳೆಯ ವಿಷ್ಯ,ಆದರೆ ನಾನು ಈಗ ಅದರ ಬಗ್ಗೆ ಹೇಳೋಕೆ ಹೊರಟಿದ್ದೀನಿ.ಸಾಮಾನ್ಯವಾಗಿ ಭಯ ಎಲ್ಲರಲ್ಲೂ ಎಲ್ಲೋ ಒಂದು ಕಡೆ ಅವತು ಕುಳಿತಿರುವ ತರ್ಲೆ.ಕೆಲವರಿಗೆ ತನ್ನ ಪ್ರಭಾವ ಹೆಚ್ಚು ತೋರಿದರೆ,ಒಂದಷ್ಟು ಜನರ ಬಳಿ ತಗ್ಗಿಬಗ್ಗಿ ಇರುತ್ತದೆ ಆ ವಿಷ್ಯ ಬೇರೆ ! ಚಲನಚಿತ್ರ ಕಲಾವಿದರು ತೆರೆಯಮೇಲೆ ಹಾವನ್ನು ಹಿಡಿದು,ಹುಲಿಯನ್ನು ಹೊಡೆದು,ದೆವ್ವದೊಂದಿಗೆ ಬಡೆದಾಡಿದರು,ಮರೆಯಲ್ಲಿ ಅವರು ಕೆಲವು ವಿಷಯಗಳಿಗೆ ಭಯಭೀತರು!ಕೆಲವು ಸಿನಿಮಾಗಳಲ್ಲಿ ಹಿರೋಯಿನ್ ಒಲಿಬೇಕಾದ್ರೆ ನಮ್ ಹೀರೋ ಜಿರಳೆ ಹಿಡೀಲೆ ಬೇಕು ಅಂತಹ ಪರಿಸ್ಥಿತಿ! ನಮ್ಮ ಸ್ಯಾಂಡಲ್ ವುಡ್ಡಿನಲ್ಲಿ ತನ್ನ ಪ್ರತಿಭೆ ತೋರಿದ್ದ ನೆರೆಯ ರಾಜ್ಯದ ನಟಿ ಶ್ರೀದೇವಿ (ನವನಟಿ )ಗೆ ಹಲ್ಲಿ ಕಂಡ್ರೆ ಹೆದರಿ ಸಾಯೋ ಹಾಗೆ ಆಗುತ್ತಂತೆ ,ಅದೇ ರೀತಿ ಅದೇ ನಮ್ ಪುನಿತ್ ರಾಜ್ ಕುಮಾರ್ ಜೋಡಿ ಆಗಿದ್ದ ಮಲೆಯಾಳಂ ಕುಟ್ಟಿ ಮೀರ ಜಾಸ್ಮಿನ್ಗೆ ಸಹ ಹಲ್ಲಿ ಕಂಡ್ರೆ ಸಿಕ್ಕಾಪಟ್ಟೆ ಹೆದರಿಕೆ,ಅದೆಷ್ಟು ಅಂತ ಅಂದ್ರೆ ಕಿರ್ಚಾಡಿ...ಕಿರ್ಚಾಡಿ....! ಬ್ಯಾಡ ಮನೆಯವರ ಕಥೆ! ಇದೆ ವರ್ಗಕ್ಕೆ ಸೇರಿದ ಬಾಲಿವುಡ್ ಹೆಣ್ಣುಮಕ್ಕಳ ಬಗ್ಗೆ ಹೇಳೋದೇ ಆದ್ರೆ,ವಿದ್ಯಾಬಾಲನ್,ಪ್ರಿಯಾಂಕ ಚೋಪ್ರಾ,ಹಲ್ಲಿಪ್ರಿಯರು! ಆದರೆ ಮಾಧುರಿ ದೀಕ್ಷಿತ್ಗೆ ಜಿರಳೆ ಕಂಡ್ರೆ ಹೆದರಿಕೆಯಂತೆ!ಅಮಿಷ ಪಟೇಲ್,ಅಯೇಶ ತಕಿಯಾ,ಪರಿಸ್ಥಿತಿ ಸಹ ಹೀಗೆ ಇದೆ.ಹಲ್ಲಿ,ಜಿರಳೆ ನಂತರ ಸ್ಥಾನ ಪಡೆದುಕೊಳ್ಳುವುದು ಹಾವು....!
ಪ್ರಾಣಿಗಳ ವಿಷಯ ಹೀಗಾದ್ರೆ ಹೆಚ್ಚು ಜನರಿಗೆ ಹೆದರಿಕೆ ಉಂಟಾಗೋದು ದೆವ್ವಗಳನ್ನು ಕಂಡ್ರೆ.ದೆವ್ವದ ವಿಷಯಕ್ಕೆ ಬಂದ್ರೆ ಬಾಲಿವುಡ್ ದೆವ್ವಪ್ರಿಯ ರಾಮ್ಗೋಪಾಲ್ ವರ್ಮ ಜ್ಞಾಪಕಕ್ಕೆ ಬರ್ತಾರೆ.ಆತ ಸಹ ಸಿಕ್ಕಾಪಟ್ಟೆ ಹೆದರುಪುಕ್ಲ.ಆ ಹೆದರಿಕೆಯಿಂದ ದೂರ ಆಗಲು ಆತ ಜನ ಹೆದರುವ ಸಿನಿಮಾ ತೆಗೆಯುತ್ತಾನಂತೆ.ರಾಮುಗೆ ಕತ್ತಲು,ಒಂಟಿಯಾಗಿ ಪ್ರಯಾಣ,ಕಳ್ಳ-ಪೋಲೀಸ್ ಇಬ್ಬರನ್ನು ಕಂಡರೂ ಹೆದರಿಕೆಯಂತೆ!ಈತ ನಿರ್ಮಿಸಿದ ಸಿನಿಮಾ ನೋಡೋಕೆ ತುಂಬಾ ಹೆದರ್ತಾರಂತೆ ರಾಮು!ಬಿಂದಾಸ್ ನಟಿ ಬಿಪಾಸ ಬಸುಗೆ ಸಹ ಒಂಟಿಯಾಗಿ ಇರಲು,ದೆವ್ವಗಳನ್ನು ಕಂಡ್ರೆ ಭಯ....ಭಯ! ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ಗೆ ಅತಿ ಎತ್ತರದ ಕಟ್ಟಡದ ಮೇಲಿಂದ ಕೆಳಗೆ ನೋಡಲು ಸಿಕ್ಕಾಪಟ್ಟೆ ಹೆದರಿಕೆ.ರಿಸ್ಕ್ ಶಾಟ್ ಸಂದರ್ಭದಲ್ಲಿ ಆತ ಗಾಯತ್ರಿ ಮಂತ್ರವನ್ನು ಜಪಿಸುತ್ತಾನಂತೆ.ದೀಪಿಕಾ ಪಡುಕೋಣೆ ಸಹ ಇದೆ ಗುಂಪಿಗೆ ಸೇರಿದ್ದಾರೆ.ಶಾಲೆಯಲ್ಲಿ ಇದ್ದಾಗ ಎಲ್ಲರಿಗಿಂತ ಮೊದಲು ನಿಲ್ಲಲು,ಮಾತನಾಡಲು ಹೆದರಿಕೆ ಇತ್ತು ಇದು ತಬು ಪರಿಸ್ಥಿತಿ! ಎಗರೆಗರಿ ನಗುವ ನಿರೂಪಕ ಸಿದ್ದು ಗೆವ ಮಾತು ಆಡೋದು ಅಂದ್ರೆ ಅಷ್ಟಕಷ್ಟೇ.ಒಂಟಿತನ,ಸೋಲು,ಅಪನಿಂದೆ....! ಹಲವು ಕಾರಣಗಳು ಹೆದರಿಕೆಗೆ ಕಾರಣ ಆಗುತ್ತದೆ.ಆದ್ರೆ ಭಯ ನಿಜವಾಗಲು ಭಯ ಪಡಿಸುವ ವಿಷಯವೇ ತಾನೇ!

Thursday, 25 June 2009

ನಮ್ಮ ಉನ್ನತಿಗಾಗಿ ಪ್ರಾರ್ಥನೆ

ಸಾಮಾನ್ಯವಾಗಿ ನಾವು ಅನೇಕ ರೀತಿಯ ಚಿಕಿತ್ಸಾ ವಿಧಾನದ ಬಗ್ಗೆ ಕೇಳಿ ಇರುತ್ತೇವೆ.ಕೆಲವು ಸರ್ತಿ ಅನುಭವದ ಮೂಲಕ ಅವುಗಳ ಫಲಿತಾಂಶ ತಿಳಿದೇ ಇರುತ್ತೇವೆ.ಆದರೆ ಪ್ರಾರ್ಥನಾ ಚಿಕ್ತಿಸೆ ಬಗ್ಗೆ ಎಷ್ಟು ಜನಕ್ಕೆ ತಿಳಿದಿದೆ?ಅದಕ್ಕೋ ಸಹ ಕೆಲವು ನಿಯಮಗಳನ್ನು ಅನುಸರಿಸ ಬೇಕು ಅಂತ ಹೇಳ್ತಾರೆ ತಜ್ಞರು.ಕ್ರಮಬದ್ಧ ಪದ್ದತಿಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ಎಂದು ಸಹ ತಿಳಿಸಿದ್ದಾರೆ. ನಮ್ಮ ಶಾಸ್ತ್ರಗಳಲ್ಲಿ ಪ್ರಾರ್ಥನೆ ಮೂಲಕ ಮಹರ್ಷಿಗಳು ಚಿಕಿತ್ಸೆ ಮಾಡ್ತಾ ಇದ್ದರು ಅನ್ನುವ ಸಂಗತಿ ಗೊತ್ತೇ ಇದೆ.ಅದಕ್ಕೆ ಪೂರಕವಾದ ಪ್ರಮಾಣಗಳು ದೊರಕಿವೆ.ಯೇಸು,ಶಿರಡಿ ಸಾಯಿಬಾಬ,ರಾಮಕೃಷ್ಣ ಪರಮ ಹಂಸ ಮುಂತಾದ ಮಹಾನುಭಾವರು ಸ್ಪರ್ಶದ ಮೂಲಕ ರೋಗವನ್ನು ದೂರಮಾಡಿದ ಉದಾಹರಣೆಗಳು ಸಾಕಷ್ಟಿವೆ.ಇವೆಲ್ಲವೂ ಪ್ರಾರ್ಥನೆಯ ಮೂರ್ತ ರೂಪ ಅಂತಲೇ ಹೇಳ ಬೇಕು.ಪ್ರಾರ್ಥನೆ ಮಾಡುವವರ ದೇಹದಲ್ಲಿ ಕೆಲವು ರಾಸಾಯನಿಕ ಪರಿವರ್ತನೆಗಳು ನಡೆಯುತ್ತದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮನಸ್ಸು ನಿರ್ಮಲವಾಗಿ,ಸಕಾರಾತ್ಮಕ ವಾಗಿ ಆಲೋಚಿಸುವ ವ್ಯಕ್ತಿತ್ವ ಉಂಟಾಗುತ್ತದೆ.ಪ್ರಾರ್ಥನೆಗೆ ಎಲ್ಲದಕಿಂತ ಮುಖ್ಯವಾದುದು ಶ್ರದ್ಧೆ,ವಿಶ್ವಾಸ.ಚಂಚಲ ಮನಸಿನಿಂದ ಉತ್ತಮ ಫಲಿತಾಮ್ಶಕ್ಕೆ ಖೋತ ಬೀಳುತ್ತದೆ!ಪ್ರಾರ್ಥನೆಯ ವಿಶೇಷತೆ ಅಂತ ಅಂದ್ರೆ ಇದಕ್ಕೆ ಆಸ್ತಿಕ ಹಾಗೂ ನಾಸ್ತಿಕ ಅನ್ನುವ ಬೇಧ ಭಾವ ಇಲ್ಲ,ಎಲ್ಲರು ಇಷ್ಟಪಟ್ಟು ಮಾಡುವ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ವಿಧಾನವಾಗಿದೆ.
ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ಮೂಲ ಉದ್ದೇಶದಲ್ಲಿ ಯಾವುದೇ ಭಿನ್ನತೆ ಇರದು.ಪ್ರಾರ್ಥನೆ ಅಂದರೆ ಕೆಲವರ ಪ್ರಕಾರ ಅವಸರವರವಾಗಿ ಮಾಡುವ ಕ್ರಿಯೆ.ಆದರೆ ಅದು ಆ ರೀತಿಯದ್ದಲ್ಲ,,ಸಹಜವಾಗಿ ಉದ್ಭವ ಆಗುವ ಪ್ರಕ್ರಿಯೆ!ಪ್ರಾರ್ಥನೆ ಪ್ರೇಮದ ಪರಮ ಉತ್ಕೃಷ್ಟ ರೂಪ ಆಗಿದೆ.'ಭಗವಂತಎಲ್ಲರಿಗೂ ಆರೋಗ್ಯ ನೀಡಪ್ಪ 'ಅಂದುಕೊಂಡರೆ ಸಾಕು ನಿಮ್ಮ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆ ಸಿಗುತ್ತದೆ ಅಂತಾರೆ ತಜ್ಞರು!ಆದರೆ ಪ್ರಾರ್ಥನೆ ಮಾಡಲು ಮುಂಜಾನೆ ಅಥವಾ ಸಂಜೆ ಅತ್ಯಂತ ಸೂಕ್ತವಾದುದು.ಆ ಸಮಯದಲ್ಲಿ ಈಶ್ವರ ತತ್ವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಇದು ಸಹ ಗುರುವಿನ ಮೂಲಕ ಕಲಿಯ ಬೇಕಾದ ವಿದ್ಯೆ.ಗುರು ಇದರ ರಹಸ್ಯಗಳನ್ನು ಹೇಳಿಕೊಟ್ಟಾಗ ಸುಲಭ ರೀತಿಯಯಲ್ಲಿ ಏಕಾಗ್ರತೆ ಹೊ೦ದಬಹುದು .ಆದರೆ ಈ ಪ್ರಕ್ರಿಯೆಗೂ ಸಾಧನೆ ಅತ್ಯಗತ್ಯ!

Monday, 25 May 2009

ಪೆಥಲಾಜಿಕಲ್ ಗ್ಯಾಮ್ಬ್ಲಿಂಗ್

ಈಗಷ್ಟೇ ಟ್ವೆಂಟಿ-20 ಮ್ಯಾಚ್ ಮುಗಿಯಿತು.ಅದರಿಂದ ಯಾರಿಗೆಷ್ಟು ಪ್ರಯೋಜನ ಆಗೋತ್ತೋ ಏನೋ ಗೊತ್ತಿಲ್ಲ,ಆದರೆ ಇಂತಹ ಪಂದ್ಯಗಳ ಆಟಗಾರರ ಮೇಲೆ ಕಟ್ಟುವ ಬೆಟ್ಟಿಂಗ್ ಹಾವಳಿ ಮಾತ್ರ ಸಿಕ್ಕಾಪಟ್ಟೆ ಜೋರಾಗಿ ಇರುತ್ತದೆ .ಈ ರೀತಿಯ ಬೆಟ್ಟಿಂಗ್ ಕಟ್ಟುವ ಅಭ್ಯಾಸಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಪೆಥಲಾಜಿಕಲ್ ಗ್ಯಾಮ್ಬ್ಲಿಗ್ ಎಂದು ಕರೆಯುತ್ತಾರೆ.ಇದು ಹೆಚ್ಚಾಗಿ ನಮಗೆ ಕ್ರೀಡಾ ಕ್ಷೇತ್ರದಲ್ಲೋ ಅಥವಾ ,ಕುದುರೆ ರೇಸ್ ನಲ್ಲಿಯೂ ಕಂಡು ಬರುತ್ತದೆ.ಇದೊಂದು ಮಾನಸಿಕ ವ್ಯಾಧಿ.ಈ ಸಮಸ್ಯೆಗೆ ಒಳಗಾದವರು ತಮ್ಮ ಹಿಂದಿನ ಅನುಭವಗಳನ್ನು ಮರೆತು ಹೋಗುತ್ತಾರಲ್ಲದೆ,ಪುನಃ ಹೊಸ ಯೋಜನೆಯ ತಯಾರಿಯತ್ತ ತಮ್ಮ ಗಮನ ಕೇಂದ್ರೀಕರಿಸುತ್ತಾರಂತೆ.ತಮ್ಮ ಮನಸ್ಸು ಖುಷಿಯಾಗಲು ಅವರು ಹೆಚ್ಚಿನ ಮೊತ್ತವನ್ನೇ ಖರ್ಚು ಮಾಡುತ್ತಾರೆ .ಮತ್ತೊಮ್ಮೆ ಇಂತಹ ಬೆಟ್ಟಿಂಗ್ ಕಡೆ ಕಣ್ಣೆತ್ತಿ ನೋಡಬಾರದು ಎಂದು ಸದಾ ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ಪಾಲಿಸಲಾಗದೆ ವಿಫಲಗೊಳ್ಳುವುದುತನ್ನ ಇಂತಹ ಅಭ್ಯಾಸದಿಂದ .ಒಂದು ವೇಳೆ ಬಿಟ್ಟೆ ಬಿಡ ಬೇಕು ಎಂದು ಗಟ್ಟಿ ನಿರ್ಣಯ ತೆಗೆದುಕೊಂಡು ಬಳಿಕ ಅಶಾಂತಿಯಿಂದ ಎಗರಾದುವುದು,ಹಣಕ್ಕಾಗಿ ಮೋಸ,ವಂಚನೆ ಯತ್ತ ಕೈ ಹಾಕುವುದು.ಗ್ಯಾಮ್ಬ್ಲಿಂಗ್ ಕಾರಣದಿಂದ ಕೆಲಸ ಮಾಡುವ ಕಡೆ ಮತ್ತು ಸ್ನೇಹಿತರ ,ಆಪ್ತೇಷ್ಟರ ಬಳಿ ಸುಳ್ಳು ಹೇಳುವುದು.....! ಹೀಗೆ ಅನೇಕಾನೇಕ.ಇಂತಹ ಮನೋ ವ್ಯಾಧಿಗೆ ಗುರಿಯಾದ ವ್ಯಕ್ತಿಗಳಲ್ಲಿ ಈಗ ಲಕ್ಷಣಗಳು ಕಾಣಸಿಗುತ್ತದೆ.
ಗೆಲುವು :- ಗ್ಯಾಮ್ಬ್ಲಿಂಗ್ ನಲ್ಲಿ ಮೊದಲ ಬಾರಿ ದೊರೆತ ವಿಜಯವನ್ನು ದೊಡ್ಡದು ಮಾಡಿಕೊಂಡು ಸಂಭ್ರಮಿಸುವುದು.ನಂತರ ತಾವೆಷ್ಟು ಕ್ರೀಡಾ ನಿಪುಣರೆಂದು ಹೆಮ್ಮೆ ಪಡುವುದಲ್ಲದೆ,ಪ್ರತಿ ಸರ್ತಿ ಗೆಲುವು ತಮಗೆ ಕಟ್ಟಿ ಇಟ್ಟಿದ್ದು ಎಂದು ಕನಸು ಕಾಣುವುದು.
ಸೋತ ಮೊತ್ತ ಮತ್ತೆ ಪಡೆಯುವ ಪ್ರಯತ್ನ :-ತಾವು ಎಷ್ಟು ಹಣ ಕಳೆದುಕೊಂದಿದ್ದೆವೋ ಅದನ್ನು ಪುನಃ ಪಡೆಯುವತ್ತ ತಮ್ಮ ಗಮನ ನೆಟ್ಟಿರುತ್ತಾರೆ.ಪರಿಣಾಮ ಮತ್ತಷ್ಟು ಹಣದ ಹೂಡಿಕೆ.ಅಲ್ಲದೆ ಈಸರ್ತಿ ಅಷ್ಟೇ ಮತ್ತೆಂದಿಗೂ ಅದರತ್ತ ಸುಳಿಯೇ ಅನ್ನುವ ಆಶ್ವಾಸನೆ ......!

ನಿರಾಸೆ:-ಈ ರೀತಿಯ ಅಭ್ಯಾಸದಿಂದ ಹಣದ ಹೊಳೆ ಹರಿದು ಅವರ ಆರ್ಥಿಕ ಸ್ಥಿತಿ ಬತ್ತಿದ ನದಿಯಾಗುತ್ತದೆ.ಪರಿಣಾಮ ಚೆಕ್ ಬೌನ್ಸ್ !ತಮ್ಮ ಆಪ್ತರ ಸಹಾಯ ಪಡೆದು ಇವರು ಸಮಸ್ಯೆಯಿಂದ ಪಾರಾಗ ಬಹುದು,ಆದರೆ ಅದೇ ಚಟವಾಗಿ ಮಾರ್ಪಾಡಾಗುತ್ತದೆ.ಮೇಲೆ ತಿಳಿಸಿದ ಘಟ್ಟಗಳೂ ದಾಟಿದರೆ ಅವರ ಸ್ಥಿತಿ ದಮನೀಯವಾಗುತ್ತದೆ.ಯಾರ ಬಳಿಯೂ ಸಹಾಯ ಸಿಗದೇ ಡಿಪ್ರೆಶನ್ ಜೊತೆಯಾಗುತ್ತದೆ.ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವು ಅಧಿಕವಾಗಿರುತ್ತದೆ.ಅಂತಹ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗುವ ಸಂಭವ ಇರುತ್ತದೆ.
ಚಿಕಿತ್ಸೆ:- ಉತ್ತಮ ಬಾಂಧವ್ಯ ಬೆಳೆಯುವುದರತ್ತ ಆದ್ಯತೆ ನೀದುದ್ವುದು.ಇಲ್ಲಿ ಕುಟುಂಬದ ಸದಸ್ಯರ ಪಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತದೆ..ಅವರನ್ನು ಕೆಲಸಕ್ಕೆ ಹೋಗುವಂತೆ ಪ್ರೋತ್ಸಾಹಿಸುವುದು.ಅವರನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವುದು.ಅವರಿಂದ ಕೌನ್ಸಿಲಿಂಗ್ ಕೊಡಿಸುವುದು.....!
ನನ್ನ ಮಿತ್ರರೊಬ್ಬರು ಬೆಟ್ ಕಟ್ಟೋ ಗುಣ ಹೊಂದಿದ್ದಾರೆ.ಅವರಿಗೆ ಇವೆಲ್ಲ ಹೇಳಿದ್ದೇನೆ,ಆದರೆ ಆಟ ಸಾರಿ ಹೋಗಲ್ಲ ಅಂತ ಇನ್ನೊಬ್ಬ ಮಿತ್ರ ನನ್ನ ಬಳಿ ಬೆಟ್ ಕಟ್ಟಿದ್ದಾನೆ ನೋಡ್ ಬೇಕು ಯಾರು ಗೆಲ್ತೀವೋ ಅಂತ :-)

Saturday, 9 May 2009

ವೇದಗಳಲ್ಲಿ ಇಂದ್ರ

ರಾಮಾಯಣ ಹಾಗು ಮಹಾ ಭಾರತ ಗಳಲ್ಲಿ ಇಂದ್ರನನ್ನು ತುಂಬಾ ಪರಾಕ್ರಮಶಾಲಿ ಎಂದು ಹಾಗೂ ಕಾಮುಕನೆಂದು ವರ್ಣಿಸಲಾಗಿದೆ.ಆದರೆ ವೇದಗಳಲ್ಲಿ ಈತನನ್ನು ಉದಾತ್ತಶಾಲಿ,ಪ್ರತಿಭಾವಂತ,ಶತ್ರು ಸಂಹಾರಕ ಎಂದು ವರ್ಣಿಸಲಾಗಿದೆ. ವೇದಗಳಲ್ಲಿ ಮುವ್ವತ್ಮೂರು ಕೋಟಿ ದೇವಿ ದೇವತೆಗಳ ವರ್ಣನೆ ಮಾಡಲಾಗಿದೆ .ಇದನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ದ್ಯು=ಆಕಾಶದಲ್ಲಿ ನೆಲೆಸಿರುವವರು,ದೇವತಾ=ಅಂತರಿಕ್ಷ(ಮಧ್ಯ),ಸ್ಥಳೀಯ ದೇವತೆ .ಅಂತರಿಕ್ಷ ದೇವತೆಗಳಲ್ಲಿ ಇಂದ್ರ ಅಗ್ರಮಾನ್ಯ.ಆರ್ಯರಿಗೆ ಇಂದ್ರ ಪ್ರಿಯನಾದ ದೇವತೆ.ಇಂದ್ರನನ್ನು ಸ್ತುತಿಸುವ ಇನ್ನೂರ ಐವತ್ತು ಶ್ಲೋಕಗಳು ( ಚಿಕ್ಕ-ದೊಡ್ಡ,ಎಲ್ಲವನ್ನು ಜೊತೆ ಸೇರಿಸಿದರೆ ಮುನ್ನೂರಾಗುತ್ತದೆ).ಶತ್ರು ಸಂಹಾರಕನಾದ ಇಂದ್ರನಿಗೆ ವಿಶೇಷ ಸ್ಥಾನ ಇದೆ.ವ್ರುತ್ತಾಸುರ,,ಶತ್ರುಪುರಿ,ಶಂಭಾರ....!ಇನ್ನು ಅನೇಕ ರಾಕ್ಷಸರನ್ನು ನಾಶ ಮಾಡಿದ ದೇವತೆ ಅನ್ನುವ ಅಗ್ಗಳಿಕೆ ಈತ ಹೊಂದಿದ್ದಾನೆ ಋಗ್ವೇದದಲ್ಲಿ .ಇಂದ್ರ ವಜ್ರಾಯುಧಡಿದ ಶತ್ರು ಸಂಹಾರ ಮಾಡಿದರೂ,ಆಗಾಗ ಆತ ಬಾಣ ಉಪಯೋಗಿಸಿ ಶತ್ರು ಸಂಹಾರ ಮಾಡುತ್ತಾನೆ.ಇಂದ್ರ ಬಾಣದಲ್ಲಿ ಯುದ್ಧ ಮಾಡಿದ ಬಗ್ಗೆ ಅಥರ್ವಣ ವೇದದಲ್ಲಿ ವರ್ಣನೆ ಇದೆ(19/13/4) . ಋಗ್ವೆದದಿಂದ ಹಿಡಿದು ಉಪನಿಷತ್ ತನಕ ಇಂದ್ರ ಶತ್ರುಸಂಹಾರಕ ಎಂದು ತಿಳಿಸಲಾಗಿದೆ.ವೈದಿಕ ಕಾಲದಲ್ಲಿ ಇಂದ್ರ ರಾಷ್ಟ್ರೀಯ ದೇವತೆಯಾಗಿ ಪೂಜಿಸಲ್ಪಡುತ್ತಿದ್ದ.ಈತ ಮಹಾ ಬುದ್ಧಿವಂತ ಎಂದು ಋಗ್ವೇದದಲ್ಲಿ ವರ್ಣಿಸುತ್ತದೆ.ಜನರ ಪ್ರಾಣ ರಕ್ಷಕ.....!ಹಲವಾರು ರೀತಿ ವರ್ಣಿಸಲಾಗಿದೆ.ಅಜೇಯ,ವೀರತೆ,ಸಾರ್ವಭೌಮತ್ವ ,ಜ್ಞಾನ ಇವೆಲ್ಲದರ ಅಧಿಪತಿ ಅನ್ನುವ ವರ್ಣನೆಯು ಇಂದ್ರನಿಗೆ ಗಿಟ್ಟಿದೆ.ಈ ಎಲ್ಲ ಕಾರಣದಿಂದ ಈತ ಸ್ವರ್ಗಕ್ಕೆ ರಾಜ ಹಾಗು ದೇವತೆಗಳ ಅಧಿಪತಿ. ಆದರೆ ಸಾಮಾನ್ಯವಾಗಿ ಪೌರಾಣಿಕ ಚಲನಚಿತ್ರಗಳಲ್ಲಿ ಹಾಗು ಪೌರಾಣಿಕ ಇಂದ್ರ ಋಗ್ವೇದದಲ್ಲಿ ತಿಳಿಸಿರುವಷ್ಟು ಬುದ್ಧಿವಂತನಲ್ಲ ... !ಜೊತೆಗೆ ವಿಲಾಸಿ,ಹೀಗೆ ಹತ್ತು ಹಲವಾರು ರೀತಿಯಲ್ಲಿ ಆತನನ್ನು ತೋರಿಸುತ್ತಾರೆ.ಏನಾದರು ಇಂದ್ರ ವೇದಗಳ ಕಾಲದ ಅಧಿಪತಿ ಅನ್ನುವುದನ್ನು ಮಾತ್ರ ಒಪ್ಪಿಕೊಳ್ಳಲೇ ಬೇಕು.

Tuesday, 7 April 2009

ನೀನು ನೀನಾಗಿರು

ಗೆಳತಿ,
ಕಳೆದೆರಡು ದಿನದಿಂದ ನಾನು ನಿನ್ನ ಪತ್ರವನ್ನು ಜೊತೆಯಲ್ಲಿ ಇಟ್ಟುಕೊಂಡು ಮೌನವಾಗಿ ಕುಳಿತು ಬಿಟ್ಟಿದ್ದೇನೆ.ಏನು ಮಾಡೋದಕ್ಕೂ ಹೊಳಿತಾ ಇಲ್ಲ.ಅಷ್ಟು ಜಡತ್ವ.ನಿನ್ನ ಪರಿಸ್ಥಿತಿಯನ್ನು ನಾನು ಊಹಿಸಿಕೊಳ್ಳಬಲ್ಲೆ.ನಿನ್ನ ದುಃಖ ನನಗೆ ಅರ್ಥ ಆಗಿದೆ.ತಕ್ಷಣ ಬಂದು ನಿನ್ನ ಕಣ್ಣೀರನ್ನು ಒರೆಸುವ ಆಸೆ ಆದರೆ ನಾನು ಹೆಲ್ಪ್ ಲೆಸ್.ನನ್ನ ಕೆಲಸದ ರೀತಿಯೇ ಅಂತಹುದು.ಸಿಯಾಚಿನ್ ಗಡಿಯಲ್ಲಿ ನಾನು ಕರ್ಣಾಟಕದ ಮೂಲೆಯಲ್ಲಿ ನೀನೂ,ಆದರೆ ಮನಸ್ಸುಗಳಿಗೆ ಅಂತರ ಇದೆಯಾ?ನಿನ್ನ ಪ್ರೀತಿ ಒಡೆದು ಹೋಯ್ತು ಅಂತ ಬರೆದಿದ್ದಿಯಲ್ಲ ಆ ಅಂಶವೇ ನನ್ನನ್ನು ಕಂಗಾಲು ಮಾಡಿದೆ.ಅವನನ್ನು ಅದೆಷ್ಟು ಪ್ರೀತಿಸ್ತಾ ಇದ್ದೆ,ನಿನ್ನ ಪತ್ರದ ಒಂದೊಂದು ಅಕ್ಷರ ಈಗಲೂ ಅವನನ್ನು ಮರೆತಿಲ್ಲ ಅಂತ ಹೇಳ್ತಾ ಇದೆ.ನಿಜವಾ? ಮರೆಯೋದು ಸುಲಭ ಅಲ್ಲ ಅಂತ ನಂಗೆ ಗೊತ್ತು,ಗೆಳತಿ ನೀನೂ ಇನ್ನು ಅವನನ್ನು ಪ್ರೀತಿಸ್ತಾನೆ ಇದ್ದೀಯ ಹಾಗಂತ ನಂಗೆ ಈ ಪತ್ರ ಓದಿದಾಗ ಪದೇಪದೆ ಮನಸ್ಸಿಗೆ ಹೊಳೆದಿದೆ. ನಿಜವಾ ? ಯಾಕೋ ಗೊತ್ತಿಲ್ಲ ಏನು ಹೇಳ ಬೇಕು ಅಂತ ತೋಚ್ತಾನೆ ಇಲ್ಲ.ನಿನಗೆ ಮೋಸ ಮಾಡಿದ ಆ ನಿನ್ನ ಹಳೆಯ ಮಧುರ ನೆನಪಾದ ಅವನನ್ನು ಎಲ್ಲರ ಮುಂದೆ ಕ್ರೂರವಾಗಿ ನಿಂದಿಸ ಬೇಡ ಕಣೆ ಪ್ಲೀಸ್,ನೀನೂ ಇಷ್ಟು ದಿನ ಪ್ರಾಂಜಲವಾಗಿ ಪ್ರೀತಿಸಿದ್ದಕ್ಕೆ ಅವಮರ್ಯಾದೆ ಮಾಡಿದಂತೆ ಆಗುತ್ತದೆ.ನಿನ್ನಂತಹ ಅಪರೂಪದ ರತ್ನ ಪಡೆಯಲು ಆತನಿಗೆ ಲಕ್ ಇಲ್ಲ .ನೀನೂ ಅವನನ್ನು ಪ್ರೀತಿಸು ಅಂತ ಹೇಳಲ್ಲ,ದ್ವೇಷಿಸೋದು ಬೇಡ ಅಂತ ಹೇಳೋಕೆ ಇಷ್ಟ ಪಡ್ತೀನಿ .ಕ್ರೂರಿ ಅಂತ ತಿಳಿ ಬೇಡವೆ... ನೀನೂ ಎಲ್ಲರಿಗಿಂತ ಭಿನ್ನ ಅಂತ ಅವನು ಸಾಕಷ್ಟು ಸರ್ತಿ , ನನ್ನ ಮುಂದೆ ಅನೇಕರು ಹೇಳಿದ್ದಾರೆ,ಯಾವುದೋ ಒಬ್ಬ ವ್ಯಕ್ತಿಗಾಗಿ ನಿನ್ನತನ ಬಿಡಬೇಡ....!ತುಂಬಾ ಕ್ರೂರಿ ಅಥವಾ ಗಂಡಸರೆಲ್ಲ ಒಂದೇ ಅಂತ ಹೇಳ ಬೇಡ ... ನನಗೆ ನೀನೂ ನೀನಾಗಿರೋದು ಮುಖ್ಯ,ನೀನೂ ಎಂದಿಗೂ ನಿನ್ನಂತೆ ಇರಬೇಕು ಅದೇ ನನ್ನ ಆಸೆ.ಬರೆಯೋಕೆ ತೋಚ್ತಾ ಇಲ್ಲ ಕಣೆ .ಯೋಚಿಸು.. ದುಡುಕ ಬೇಡ
ನಿನ್ನ ಗೆಳೆಯ

Friday, 3 April 2009

ರಾಮ ಎಂಬುವ ಎರಡು...

ರಾಮಾಯಣದಲ್ಲಿ ರಾಮನಿಗಿಂತ ಹೆಚ್ಚು ಪ್ರಭಾವಶಾಲಿ ಆಗಿರುವುದು ರಾಮ ನಾಮ ಅಂತ ತಿಳಿದೋರು ಹೇಳುತ್ತಾರೆ.ನಮ್ಮಲ್ಲೂ ಅದರ ಬಗ್ಗೆ ಅನೇಕ ಕೀರ್ತನೆಗಳುಜಾರಿಯಲ್ಲಿವೆ .'ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರೈಯ್ಯ'ಹೀಗೆ ಆರಂಭಗೊಂಡ ಹಾಡು ರಾ ಅಕ್ಶರದ ಮಹಿಮೆಯಿಂದ ಹೇಳುತ್ತಾ ಹೋಗುತ್ತದೆ.ಅದೇ ರೀತಿ ನಾವು 'ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠಲ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ 'ಅಂತಲೂ ಹಾಡಿದ್ದೆವು ಹಾಗು ಹಾಡುತ್ತಲು ಇದ್ದೇವೆ.ಅಂದ್ರೆ ರಾಮ ಅನ್ನುವ ವ್ಯಕ್ತಿಗಿಂತ ಆತನ ನಾಮ ಎಷ್ಟು ಪ್ರಾಮುಖ್ಯತೆ ಪಡೆದಿದೆ ಅಂತ ಆಯ್ತಲ್ಲ.'ಶ್ರೀ ರಾಮ ಕೇವಲ ಅಯೋಧ್ಯ ಅಳಿದರೆ ರಾಮನಾಮ ಇಡಿ ಲೋಕವನ್ನು ಅಳುತ್ತದೆ'ಎಂದು ಸ್ವಯಮ್ ಹನುಮಂತ ಹೇಳಿರುವುದಾಗಿ ರಾಮಾಯಣದಲ್ಲಿ ಉಲ್ಲೇಖ ಮಾಡಿದೆ.ಈ ರಾಮ ಅನ್ನುವ ಎರಡು ಅಕ್ಷರ ಯಾವುದರಿಂದ ಪಡೆಯಲಾಗಿದೆ ಅನ್ನುವ ಅಂಶವು ತುಂಬಾ ಆಸಕ್ತಿದಾಯಕ ಆಗಿದೆ."ಓಂ ನಮೋ ನಾರಾಯಣಾಯ" ಎನ್ನುವ ಅಷ್ಟಾಕ್ಷರಿ ಮಂತ್ರದಲ್ಲಿನ 'ರಾ' ಎನ್ನುವ ಐದನೇ ಅಕ್ಷರವನ್ನು ಹಾಗು 'ಓಂ ನಮಶಿವಾಯ' ಎನ್ನುವ ಪಂಚಾಕ್ಷರಿ ಮಂತ್ರದಲ್ಲಿ 'ಮ' ಅಕ್ಷರ ತೆಗೆದು ಕೊಳ್ಳಲಾಗಿದೆ.ಅಂದರೆ ರಾಮ 'ಶಿವಕೇಶವರ 'ಏಕೀಕೃತ ಮೂರ್ತಿ.ಹೀಗೆ ಅನೇಕ ರೀತಿಯಲ್ಲಿ ಭಗವಂತನ ಬಗ್ಗೆ ಹೇಳುತ್ತಾರೆ ಭಕ್ತರು.ಏಕ ಪತಿ ವ್ರತಸ್ಥ ಅಂತ ಹೇಳುತ್ತಾರೆ,ಆದರೆ ಇನ್ನೊಬ್ಬ ಲೇಖಕರ ಅನ್ವಯ ಆತನ ತಂದೆ ದಶರಥನಿಗೆ ಸ್ವಲ್ಪ ಸ್ತ್ರೀ ಮೋಹ ಅದನ್ನು ಕಣ್ಣಾರೆ ಕಂಡು ಆತ ಏಕ ಪತ್ನಿ ವ್ರತಕ್ಕೆ ಬದ್ಧನಾದ ಅಂತಾರೆ.ಅದೆಷ್ಟು ನಿಜವೋ ಗೊತ್ತಿಲ್ಲ! ಏನೇ ಆದರು ನಾರ್ತ್ ಇಂಡಿಯನ್ ರಾಮ ದಕ್ಷಿಣವನ್ನು ಹಾಗು ಸೌತ್ ಇಂಡಿಯನ್ ಹನುಮ ಉತ್ತರವನ್ನು ಆಳ್ತಾ ಇರೋದು ಮಾತ್ರ ಸೋಜಿಗದ ಸಂಗತಿ.ಇನ್ನೊಂದು ವಿಷಯ ರಾಮ ಅಂದರೆ ಕನ್ನಡದಲ್ಲಿ 'ಪ್ರಿಯ'ಅನ್ನುವ ಅರ್ಥ ಬರುತ್ತದೆ.ರಾಮ ಆದ್ದರಿಂದಲೇ ಎಲ್ಲ ಕಾಲಕ್ಕೂ ಎಲ್ಲರಿಗೆ ಹೇಗೋ ಅಂತು ಪ್ರಿಯ ತುಂಬ ಪ್ರಿಯ!

Tuesday, 31 March 2009

ಚಿತ್ತು-ಚಿತ್ತಾರ ಇಲ್ಲ..!

ಗೆಳೆಯ...
ಗೊತ್ತು ನಂಗೆ ನೀನೂ ಈ ನನ್ನ ಮೇಲ್ ನೋಡಿದ ತಕ್ಷಣ ಪೆಚ್ಚಾಗಿ ಬಿಡ್ತಿಯಾಂತ.ಆದರೆ ನಾನು ಎಂದು ಮೇಲ್ ಮಾಡ್ತೀನಿ,ಯಾವಾಗ ಮೌನಾಗಿ ಕೂರ್ತೀನಿ ಅನ್ನುವ ಸಂಗತಿ ನನಗಿಂತ ನಿನಗೆ ಹೆಚ್ಚು ಗೊತ್ತಿದೆ ಅಂತ ಅಂದುಕೊಂಡಿದ್ದೇನೆ.ಪ್ಲೀಸ್ ಆ ನನ್ನ ನಂಬಿಕೆಯನ್ನು ಸುಳ್ಳು ಮಾಡ ಬೇಡ.ನನ್ನದೇನಿದ್ದರು ನೇರ ನುಡಿ,ನೇರ ವರ್ತನೆ.ಮೊಟ್ಟಮೊದಲು ನಿನ್ನನ್ನು ಕಂಡಾಗ ನಾನೇ ತಾನೆ ನಿನಗೆ ಪ್ರಪೋಸ್ ಮಾಡಿದ್ದು?ಏನ್ ಮಾಡ್ಲಿ ನನಗೆ ಮನಸಿನಲ್ಲಿ ಇಟ್ಟುಕೊಳ್ಳಲು ಬರೋದೇ ಇಲ್ಲ.ಎಲ್ಲವು ಬಯಲಾಗಿ ಬಿಡಬೇಕು.ಪ್ರಾಯಶ: ಆ ವರ್ತನೆ ನಿನ್ನನ್ನು ಹೆಚ್ಚು ಆಕರ್ಷಿತಾ ? ಉಹುಂ ನನಗೆ ಅದು ಗೊತ್ತಿಲ್ಲ.ಜಾಸ್ತಿ ಕೊರೀತಾ ಇದ್ದಿನಾ? ಗೊತ್ತು ನನಗೆ ಬೇರೆ ಯಾವ ವಿಷಯ ನನಗೆ ತಿಳಿದೇ ಇದ್ದರು ಈ ವಿಷಯ ಚೆನ್ನಾಗಿ ಗೊತ್ತು,ನೀನೂ ಪತ್ರವಿಲ್ಲದೆ ದಣಿದು ಬಿಟ್ಟಿದ್ದಿಯಾ ಅಂತ.ಪ್ರತಿದಿನ ಸಿಕ್ಕರೂ ನಾನು ನಿನಗೆ ವಾರಕ್ಕೊಮ್ಮೆ ನನ್ನ ಕೈಬರಹದಲ್ಲಿ ಒಂದು ಪತ್ರ ಬರೆದು ಕೊಡಬೇಕು.ಅದೇನು ತುಂಬಾ ನೀಟಾಗಿ ,ತಪ್ಪಿಲ್ಲದೆ ಇರಬೇಕು ಅಂತ ನೀನೂ ಎಂದಿಗೂ ಅಪೇಕ್ಷೆ ಮಾಡಲ್ಲ.ಪ್ರತಿ ಪತ್ರ ಓದಿದ ನಂತರ ನಿನ್ನ ತುಟಿಯಲ್ಲಿ ಒಂದು ಕಿರುನಗೆ .ಆದರೆ ನನಗೆ ಸಿಟ್ಟು ಬಂದಾಗ ಇಮೇಲ್ ಕಳುಹಿಸಿ ನನ್ನನ್ನು ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೆ.ನೀನೂ ನನಗೆ ಸಮಾಧಾನ ಮಾಡುವವರೆಗೂ ಈ ಕೆಲಸ ಮುಂದುವರೆಯುತ್ತಲೇ ಇರುತ್ತಿತ್ತು.ನಾನು ಎಲ್ಲಾ ಬಗೆಯ ಕೋಪದ ಸುನಾಮಿಗಳನ್ನು ದೂರ ಮಾಡಿ ಹಾಯಾದ ಗುಪ್ತಗಾಮಿನಿ ಮನಸ್ತತ್ವ ಪಡೆದ ಮೇಲೆ ನಿನ್ನ ವಿಶಾಲವಾದ ಅಂಗೈನಲ್ಲಿ ನನ್ನ ಪುಟ್ಟ ಹಸ್ತ ಇಮಡಿಸಿ 'ಮುದ್ದು ಪ್ಲೀಸ್ ಕೋಪ ಮಾಡ್ಕೋ ಪರವಾಗಿಲ್ಲ,ಪ್ರೀತಿಯಲ್ಲಿ ಕೋಪ ಇರಲೇ ಬೇಕು,ಆದರೆ ನನ್ನದೊಂದು ರಿಕ್ವೆಸ್ಟ್ ,ನಿನಗೆ ಎಷ್ಟೇ ಕೋಪ ಬಂದ್ರು ನನಗೆ ನಿನ್ನ ಕೈಬರಹದಲ್ಲಿ ಪತ್ರ ಬರಿ,ಆಮೇಲ್-ಈಮೇಲ್ ಅಂತ ಮಾಡಿ ಕರ್ತವ್ಯ ಮುಗೀತು ಅಂತ ಸುಮ್ಮನಾಗ ಬೇಡ.ಶುದ್ಧ ಅರಸಿಕ ಕಂಪ್ಯೂಟರ್ ಮೇಲ್ .ಕೈ ಬರಹದಲ್ಲಿ ಇರುವಂತೆ ಎಲ್ಲು ಚಿತ್ತು ,ಚಿತ್ತಾರ ಇರಲ್ಲ. ಸಣ್ಣ ಅಕ್ಷರ,ದಪ್ಪ ಅಕ್ಷರ,ಅಲ್ಲೆಲ್ಲೋ ದಾರಿ ತಪ್ಪಿದ ವಾಕ್ಯ,ಸ್ವಲ್ಪ ಗ್ರಾಮರ್ ಮಿಸ್ಟೇಕ್,ಮಧ್ಯೆ ನಿನ್ನ ಮೂಡ್ಗೆ ತಕ್ಕಂತೆ ರಂಗೋಲಿ,ಏನಿರುತ್ತೆ ಇಲ್ಲಿ,ಎಲ್ಲವು ಒಪ್ಪ.ಬ್ಯಾಡ ಕಣೆ ಬಂಗಾರಿ ನನಗೆ ಅಂತಹ ಪತ್ರ !ಪ್ಲೀಸ್..ಪ್ಲೀಸ್..! ಈ ವಿಷಯದಲ್ಲಿ ಕರುಣೆ ತೋರು' ಅಂತ ಹೇಳಿರ್ತೀಯಾ,ಆದರೆ ಕೋಪ ಬಂದಾಗ ನನ್ನದು ಮತ್ತದೇ ಇಮೇಲ್ ಗಲಾಟೆ.ಈ ಬಾರಿ ನನಗೆ ಯಾಕೆ ಕೋಪ ಬಂದಿದೆ ಅಂತ ನನ್ನನ್ನೇ ನೀನೂ ಕೇಳ್ತಿಯಾ? ನನಗೆ ಗೊತ್ತಿಲ್ಲ.ಆದರೆ ನಿನ್ನ ಮೇಲೆ ಸಿಟ್ಟು ಬಂದಿದೆ ಅಷ್ಟು ಮಾತ್ರ ಹೇಳಬಲ್ಲೆ.
ನಿನ್ನ ಗೆಳತಿ

Followers