Wednesday, 29 January 2014

ಪುಟ್ಟ ಗೆಳೆಯ


ಪ್ರೀತಿಯ ಪುಟ್ಟ ಗೆಳೆಯ,
ಮತ್ತೆ ನಾನು ಹೇಳುವ ಮಾತುಗಳು ನನ್ನಲ್ಲೇ ಉಳಿದು ಬಿಡ್ತಾ ಇದೆ ಅಂತ ಅನ್ನಿಸುತ್ತಿದೆ ಗೆಳೆಯಾ.. ಗೊತ್ತಿಲ್ಲ ಯಾಕೆ ಹೀಗಾಗಿದೆ ಅಂತ. ವಯಸ್ಸಿನಲ್ಲಿ ನೀನು ತುಂಬಾ ಚಿಕ್ಕವನು. ಆದರೆ ನೀನು ಅದ್ಯಾಕೆ ನನ್ನ ಬಗ್ಗೆ ಈ ಪರಿಯ ಆಸಕ್ತಿ ತೋರಿಸ್ತಾ ಇದ್ದೀಯ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನಿನ್ನ ಸಾಂಗತ್ಯದ ಮಧುರವಾದ ನೆನಪಲ್ಲಿ ನನಗೆ ಒಮ್ಮೊಮ್ಮೆ ಆಗುವ ಬೇಸರಕ್ಕೆ  ಖಂಡಿತಾ ನೀನಲ್ಲ. ಮನದಲ್ಲಿ ಹುದುಗಿರುವ  ಕಹಿ ನೆನಪುಗಳು ಆಗಾಗ ಕದಡುವಂತೆ ಮಾಡುವ ನನ್ನ ಬದುಕಿನ ಭಾವಭಿತ್ತಿಯಲ್ಲಿ ಅಡಗಿರುವ ನೋವಿನ ಮೂಟೆಯನ್ನು ಬಿಚ್ಚಿ ಹೇಳುವ ತವಕ ನನಗಿಲ್ಲ.
ಮದುವೆ ಕನಸ ಬಿಟ್ಟು ದೂರ ಉಳಿದವಳಿಗೆ ಈಗ ಮತ್ತೆ ವಸಂತವಾಗುವ, ಹಸಿರಾಗುವ , ಚಿಗುರಾಗುವ ಹಂಬಲವಿಲ್ಲ  . ನಿನ್ನ ಹಟವ ನಾ ಬಲ್ಲೆ. ಇದು ತಪ್ಪಲ್ಲ! ಆದರೆ ಯಾವುದು ಸ್ವೀಕರಿಸಲು ಮನವಿಲ್ಲದ ನನಗೆ ಮತ್ತೆ ಹೊಸ ಬದುಕಿನ ಬಗ್ಗೆ ಆಸೆಯಿಲ್ಲ. ಬೇಡ ಅನ್ನಿಸುವ ಬೇಕುಗಳು, ಬೇಕೇ ಬೇಕು ಎನ್ನುವ ಆಶಯಗಳು ಎಲ್ಲವನ್ನು ನಾನು ಹೇಳುವ ಹಾಗಿಲ್ಲ.. ಅರ್ಥ ಮಾಡುವ ತಾಖತ್ತು ನನ್ನಲ್ಲಿ ಉಳಿದಿಲ್ಲ. ಅದಕ್ಕೆ ವಯಸ್ಸಾದ ನೆಪವಿಟ್ಟು ಬದುಕ ನಡೆಸುತ್ತಿದ್ದೇನೆ. ಮರೆತು ಬಿಡು ಪುಟ್ಟ ಗೆಳೆಯ.. ಬದುಕು ದೊಡ್ಡದು.. ನಿನ್ನ ದಾರಿ ದೊಡ್ಡದು. ಅಲ್ಲಿ ನಿನ್ನ  ಭರವಸೆ ಇದೆ.. ನಾನು ಎಂದಿಗೂ  ಕೆತ್ತಲಾಗದ ಕಲ್ಲು.. ಬರೆಯಲಾಗದ ಹಾಳೆ..
.........
ಗೆಳತಿ !

Monday, 27 January 2014

ಈ ಸಂಬಂಧಕ್ಕೇನು ಹೆಸರು ?




ಪ್ರೀತಿಯ ಹುಡುಗಾ, 
ಕೆಲವು ಸಂಬಂಧಗಳು ಹಾಗೆ ಕಣೋ ಚಿನ್ನ ಹೇಳೋಕೆ ಆಗಲ್ಲ, ಇನ್ನು ಅದನ್ನು ಬಿಡಿಸಿಡುವ ಪ್ರಯತ್ನ ಮಾಡೋಕೆ ಹೋದರೆ ಸಿಕ್ಕೋದು ಬಿಡಿಸಲಾಗದ ಸಿಕ್ಕು, ಅರ್ಥವಾಗದ ಸಂಗತಿಗಳು.. ನನ್ನ ಮುದ್ದು ಹುಡುಗ  ಇದನ್ನು ಯಾವ ಲೇಖಕ ಹೇಗೆ ಬೇಕಾದರೂ ಕರಿಯಲಿ, ಮದುವೆಯಾಚಿಗಿನ ಸಂಬಂಧ  , ಮದುವೆ ನಂತರದ ಬಾಂಧವ್ಯ, ಅದರಾಚೆ ಇರುವ ಕೊಂಡಿ ಯಾವುದೇ ಆಗಿರಲಿ ಆದರೆ ಇದರ ಅರ್ಥವೂ ನನಗೂ- ನಿನಗೂ ಗೊತ್ತಿದ್ದರೆ ಸಾಕು ಕಣೋ ದಡ್ಡ. ಇಲ್ಲಿ ನಮಗೆ ಆಕರ್ಷಣೆ ಇದ್ದರು ಅದು ದೇಹದ್ದಲ್ಲ  ಎನ್ನುವುದು ಸ್ಪಷ್ಟ. ಯಾಕೆಂದರೆ ನೀನು ಸಂತೃಪ್ತ ಕುಟುಂಬದ ಯಜಮಾನ, ನಾನು ಅಷ್ಟೇ. ಆದರು ಮನದಲ್ಲಿ ಬೇರೂರಿದ ಆ ಕೊರತೆಯ ಕಠೋರತೆಗೆ ಬೆಚ್ಚಿ ಬಯಸುವ ಸಾಂಗತ್ಯವನ್ನು ವಿಚಿತ್ರ ಸಂಬಂಧ ಎಂದು ಅರ್ಥೈಸುವುದು ಎಷ್ಟು ಸರಿ? ನನ್ನ ಖಾಲಿ ಹಾಳೆಯ ಅಕ್ಷರ ನೀನು, ನಿನ್ನ ಕವನಗಳ ಜೀವ ನಾನು. ನಗು ಬರುತ್ತೆ ಅಲ್ವಾ ಇಂತಹ ವೈಪರಿತ್ಯ ನೋಡಿದರೆ.. ಗೆಳೆಯಾ ನಿನ್ನನ್ನು ನಾನು ಪ್ರೀತಿಯಿಂದ ಹುಡುಗಾ ಅಂತ ಕರೀತೀನಿ. ಯಾಕೆಂದ್ರೆ ನೀನು ನನ್ನ ಬಾಲ್ಯದ ಕಳೆದು ಹೋದ ಕನಸು, ನಾ ನಿನ್ನ ಬದುಕಿನ  ನಿರಂತರ ಭಾವಲಹರಿ. ಹರಿದ ಕನಸುಗಳು, ಛಿದ್ರವಾದ ಮನಸುಗಳು, ಒಡೆದ ಕಥೆಗಳ ನಡುವೆ ನಾವಿಬ್ಬರು ಇನ್ನು ಬದುಕಿದ್ದೇವೆ ಅಂದರೆ ಪ್ರಾಯಶಃ  ನೀ ನನಗೆ ಮತ್ತು ನಾ ನಿನಗೆ ಸಿಕ್ಕುವ  ಸಾಧ್ಯತೆಗಳು ಇತ್ತು ಎಂದು ಕಾಣುತ್ತದೆ. ಅದೆಷ್ಟು ದಿನಗಳಿಂದ ಕಾದಿದ್ದೆ ನನಗಾಗಿ.. ಹಾಗೆ ನಾ ನಿನಗಾಗಿ. ಎಲ್ಲೆ ಮೀರುವ- ಎಲ್ಲೂ ಮೀರದ ಪ್ರೀತಿಯ ಒಡನಾಟದ ಸಖ್ಯ ಅದೆಷ್ಟು ಹಿತಾನುಭವ ಇಬ್ಬರಿಗೂ ಅಲ್ವಾ?  ಹೇಳು ಎನ್ನರಸ. ! ಮದುವೆ ಮಕ್ಕಳು, ದಾಪತ್ಯ, ಜಂಜಾಟ ಇವೆಲ್ಲದರ ನಡುವೆ ಹಾಯಿ ಗಾಳಿ ತಂಗಾಳಿಯಾಗಿ ನೀ ಸಿಕ್ಕೆ ಅಂದರೆ ಪೂರ್ವಜನ್ಮದ ಮೇಲೆ ನನಗೆ ಸಿಕ್ಕಾಪಟ್ಟೆ ನಂಬಿಕೆ ಆಗ್ತಾ ಇದೆ. ಅಲ್ಲಿ ನಾ-ನೀ ಏನಾಗಿರ ಬಹುದು, ತಾಯಿ ಮಗ, ತಂದೆ ಮಗಳು, ಗೆಳೆಯ ಗೆಳತಿ, ಅಪೂರ್ಣವಾದ ಪ್ರೆಅಮ ಜೀವಗಳು, ಗಂಡ ಹೆಂಡತಿ, ಅಪರೂಪದ ಪ್ರೇಯಸಿ-ಪ್ರಿಯಕರ. ಮನುಷ್ಯರೇ ಆಗ ಬೇಕು ಎಂದೇನು ಇಲ್ಲ ಜಕ್ಕವಕ್ಕಿಗಳು, ತರುಲತೆ, ಹೂ ಬಳ್ಳಿ, ಏನು ಏನೆಂಬ ಪ್ರಶ್ನೆ ಉತ್ತರ ಹುಡುಕುತ್ತ ಕೂರುವ ಬದಲು, ಇರುವಷ್ಟು ಸಮಯ ಖುಷಿಯಾಗಿರೋಣ ಚೆನ್ನ.. ನನ್ನ ಚಿನ್ನ ಏನಂತೀಯ ? 
ಇಂತಿ 
ನಿನ್ನವಳಾ ?   

Sunday, 19 January 2014

ನೆಪ !



ಹೆಚ್ಚೇನೂ ಮಾತುಗಳಿಲ್ಲ
ನಿನಗೆ ತಿಳಿಸಲು ಗೆಳೆಯಾ 
ಆದರೂ ಅತಿ... 
ಹೆಚ್ಚು ಭಾವನೆಗಳ
ತಿಳಿಸುವ ಬಯಕೆ!
ಆಸೆಗೆ ಮಿತಿಯಿಲ್ಲ
ನಿಜ!
ಹಾಗೆಂದು ಇದ್ದು ಬಿಡಲು 
ಒಲ್ಲದು ಈ ಮನ 
ಬದುಕಿನ ಮಜಲುಗಳ
ಗೋಜಲಲ್ಲಿ ಕಾಡುವ 
ಹನಿಹನಿಯ ನೆನಪು
ನಿನ್ನ ನೆನಪಿಸಿಕೊಳ್ಳಲು 
ಮಾಡುವ ಒಂದು 
ಕುಂಟು ನೆಪ !

Saturday, 28 December 2013

ಅದೆಷ್ಟು ದಿನಗಳಾಯಿತು? ನಾನು ಲೆಕ್ಕದಲ್ಲಿ ಪೂರ್!





ಎಷ್ಟು  ದಿನಗಳಾಯಿತು ನಿನ್ನ ಕಂಡು ?
ಮತ್ತದೇ ಪ್ರಶ್ನೆ ನನ್ನ ಮನದಲ್ಲಿ.. ಮರೆತೆಯಾ ಗೆಳೆಯಾ? ಪ್ರತಿದಿನ ಪ್ರತಿ ಕ್ಷಣ ನಾನು ಇಂತಹ ಹುಚ್ಚು ಪ್ರಶ್ನೆಗಳನ್ನು ಕೇಳುತ್ತಾ ತಲೆ ಬಿಸಿ ಮಾಡ್ತಾ ಇದ್ದೆ.. ಯಾಕೋ ಒಂದೊಂದು ಗಳಿಗೆಯೂ ನೀನಿಲ್ಲದೆ ವ್ಯರ್ಥ ಎನ್ನುವ ಹುಚ್ಚು ಸ್ವಾರ್ಥ ನನ್ನದು. ಆದರೆ ಸದಾ ನಾನು ನಿನ್ನ ಬಳಿ ಇರಬೇಕು ಎನ್ನುವ ಆಸೆ ಪ್ರಪಂಚದ ಕೆಟ್ಟ ಆಸೆಗಳ ಸಾಲಿಗೆ ಸೇರಿಲ್ಲ ಬಿಡು ಅತ್ತ!..
ಹೌದು ನಮ್ಮ ಮೊದಲ ಭೇಟಿಯ ಕಾಲವು ಈಗಾಗಲೇ ಹಲವಾರು ವಸಂತಗಳನ್ನು ಕಂಡಿವೆ. ಆದರೂ ಆ ಹಳೆಯ ಮಧುರ ನೆನಪು ಮಾತ್ರ ಜೀವಂತ.. ನನ್ನ ಹಸಿರು ಚೂಡಿ ನಿನ್ನ ಆಕಾಶ ನೀಲಿ ಜುಬ್ಬ ಎರಡರ ಸಮಾಗಮ ಬೆಚ್ಚನೆಯ ಅಪ್ಪುಗೆಯಲ್ಲಿ..! ಹೌದು ನಾವು ಭೇಟಿ ಆದ ಮೊದಲ ದಿನ ಇವತ್ತಿಗೆ ಅದೆಷ್ಟು ಕಾಲವಾಯ್ತು ಲೆಕ್ಕದ ಪ್ರಕಾರ?..ಸಾರಿ ಕಣೊ ಹುಡುಗ ನನಗೆ ಲೆಕ್ಕಾಚಾರ ಹೆಚ್ಚು ಗೊತ್ತಿಲ್ಲ.. ಏನೇ ಆದರೂ ಅದು ಲೆಕ್ಕಕ್ಕೆ ಸಿಲುಕದಷ್ಟು .. ಹಾಗೆ ನಿನ್ನ ತಲೆ ತಿಂದದ್ದು  ಲೆಕ್ಕವಿಲ್ಲದಷ್ಟು, ಬೇಸರಿಸಿದ್ದು, ಮುದ್ದಿಸಿದ್ದು.. ಕಡೆಗೆ ಜಗಳವಾಡಿದ್ದು ಸಹ ಲೆಕ್ಕವಿಲ್ಲದಷ್ಟು.. ಎಲ್ಲವನ್ನು ಸಹಿಸಿದೆ ನೀನು ನನ್ನ ಲೆಕ್ಕವಿಲ್ಲದಷ್ಟು ಪ್ರೀತಿಗಾಗಿ..!!
ಲೆಕ್ಕದಲ್ಲಿ ತುಂಬಾ ಪೂರ್ ಕಣೊ ನಾನು .. ಹಾಗೆ ಬದುಕಿನಲ್ಲಿಯೂ ವೆರಿ ಪೂರ್ .. ನಾವು ಭೇಟಿ ಆಗಿ ಅದಾಗಲೇ ವರ್ಷಗಳೇ ಉರುಳಿವೆ.. ಅಂದು ಭೇಟಿ ಆದ ಬಳಿಕ ನಿನ್ನ ನೋಡಲೇ ಇಲ್ಲ ನಾನು .. ನಿನಗೆ ನನ್ನ ನೆನಪು ಉಳಿದಿದೆಯಾ ಎಂದು ಪ್ರಶ್ನಿಸಲು ನೀ ಬಿಟ್ಟು ಹೋಗಿಯಾಗಿದೆ ಅವಳ ಕೈ ಹಿಡಿದು..!
ಲೆಕ್ಕದಲ್ಲಿ ತುಂಬಾ ಪೂರ್ ನಾನು ಅದೆಷ್ಟು ಕಾಲವಾಗಿದೆ ನಿನ್ನ ನೋಡಿ ನಿನಗೇನಾದರೂ ನೆನಪಿದೆಯಾ ದೊರೆ..? ಅದೆಷ್ಟು ಕಾಲವಾಗಿದೆ ನಾ ಬದುಕ ಕಳೆದುಕೊಂಡು?  ನಿನ್ನ ಭಿತ್ತಿಯಲ್ಲಿ ಅದು ಹುದುಗಿದೆಯಾ ಗೆಳೆಯಾ? ಹೇಳು ಪ್ಲೀಸ್ ನಾನು ಲೆಕ್ಕದಲ್ಲಿ ತುಂಬಾ ಪೂರ್ ಹಾಗೆ ಬದುಕಿನಲ್ಲೂ !

Thursday, 19 December 2013

ನೆನಪಾದೀತ ?




ಇದು ನಿನಗೆ ಮಾತ್ರ ಎಂದು ಹೇಳುವ ಹಾಗೆ ಇಲ್ಲ ಅಂತಹ ಪರಿಸ್ಥಿತಿ ತಂದಿರೋದು ನೀನೆ ಎಂದು ಹೇಗೆ ಹೇಳಲಿ ಗೆಳೆ ಯ. ನಿನ್ನೆ ನೀ ಒಪ್ಪಿದ್ದಿ ದ್ದರೆ ಇಂದು ನನಗೆ ಈ ಸಮಸ್ಯೆ ಇರುತ್ತಿರಲಿಲ್ಲವೇ ನೊ.. ನಾ ಬರೆದ ಕವನಗಳು, ಮಾತುಗಳು ಸಂಪೂರ್ಣ ನಿನಗಾಗಿ. ಅಂದು ಭೇಟಿಯಾದ ಕ್ಷಣ ಮುತ್ತಿಟ್ಟ ಗಳಿಗೆ, ಆ ನೋಟದಲ್ಲಿ ಇಬ್ಬರು ಬೆರೆತ ರಸಮಯ ಗಳಿಗೆ ಎಲ್ಲವೂ ಸದಾ ನೆನಪಿಗೆ ಬರುತ್ತಲೇ ಇರುತ್ತವೆ.. ಕಾಡುತ್ತಲೇ ಇರುತ್ತವೆ. ನಿನ್ನ ನೆನಪು ಮರೆಯಲೆಂದು ಬರೆಯುವ ಪ್ರತಿಕವನದಲ್ಲೂ ನೀನೆ ಸಂಪೂರ್ಣ ನೀನೆ..ಆದರೆ ಅದು ತಮಗೆ ಎಂದು ತಿಳಿ ಯುವವರಿಗೆ ಏನೆಂದು ಉತ್ತರಿಸಲಿ ಗೆಳೆಯ ? ನೋವಿಗೆ ಅಂತ್ಯವಿಲ್ಲ ..! ಆದರೆ ನೋಯುವುದು ಅನಿವಾರ್ಯ.. ನಿನ್ನ ನೆನಪಲ್ಲಿ ಬೇಯುವ ಮನಕ್ಕೆ ನಾನು ಹೇಗೆ ತಂಪು ನೀಡಲಿ.. ಕಟ್ಟಿದ ಕನಸುಗಳು ಉರಿದು ಬೂದಿಯಾದಾಗ ನೀನು ಇರಲೇ ಇಲ್ಲ.. ನೀ ಬಂದಾಗ ನಾನು ಸಂಪೂರ್ಣ ಕರಕಲಾಗಿದ್ದೆ. ನನ್ನ ಆ ನೋವಿನ ಹೊಗೆಯು ನಿನ್ನ ಮೂಗಿಗೆ ಅಡ ರುವಷ್ಟರಲ್ಲಿ ನಾನು ಇಲ್ಲವಾಗಿದ್ದೆ.. ನೆನಪುಗಳು ಮಾಸಬಾರದು.. ನೀ ಇರದ ಬಾಳಿನಲ್ಲಿ ನೆನಪುಗಳೇ ಆಧಾರ . ಹೇಳು ಎಂದಾದರೂ ನೆನಪಾದೀತ ನನ್ನದು? 

ನೊಂದವಳು 

Monday, 22 July 2013

ನೆನಪಿದೆಯಾ...



 
ನೆನಪಿದೆಯಾ ನೆನಪಿದೆಯಾ...
ಗೆಳತಿ  ಅಂದು ಪದೇ ಪದೇ
ನೀನು ಕೇಳುತ್ತಿದ್ದ  ಪ್ರಶ್ನೆ.
ನೆನಪಿದೆ ನೆನಪಿದೆ ಪದೇಪದೇ
 ನಾನು ಹೇಳುವ ಉತ್ತರ..
ಪ್ರಶ್ನೆಗೆ ಎರಡೇ ಅಕ್ಷರ
 ಅದಕ್ಕೆ ನಿನಗೆ  ಪ್ರಶ್ನಿಸುವತ್ತಲೇ
ಹೆಚ್ಚು  ಗಮನ..
ಉತ್ತರಕ್ಕೆ ತಡಕಾಡದೇ
ಹೇಳುವ ಕೆಲಸ ನನ್ನದು  !  
ಇಂದು ಆ ಪ್ರಶ್ನೆಯ ಎರಡಕ್ಷರ
ನನ್ನ  ಬದುಕನ್ನು ಕಾಡುತ್ತಿದೆ...
ನಿನ್ನ ಉತ್ತರ... ....

Saturday, 6 July 2013

ಕೈಲಾಗದವರು !

ದಿನ ಒಂದೊಂದು ಸಂಗತಿಗಳು  , ಬೇಸರಗಳು ಸಂತೋಷಗಳು  .. ಹೀಗೆ ಬದುಕು ಸಾಗ್ತಾ ಇದೆ.. ನಿನ್ನೆ ಗೆಳತಿ ಒಬ್ಬಳು ನನಗೆ ಯಾಕೋ ತುಂಬಾ ಅಳು ಬರ್ತಾ ಇದೆ ಜೈ ಅಂತ ಹೇಳಿದಳು.. ಆಕೆಯ ದುಃಖದ ಕಾರಣ ನನಗೆ ತಿಳಿದಿದ್ದರೂ ಕೇಳಿದೆ ಯಾಕೆ ಏನಾಯ್ತು ಅಂತ..ಜನಗಳು ನಮ್ಮ ಹತ್ರ ಕೆಲಸ ಮಾಡಿಸಿಕೊಳ್ಳುವಾಗ ಅದೆಷ್ಟು  ಹೊಗಳುತ್ತಾರೆ, ಅದೇ ಅವರನ್ನು ನಾವು ವಿರೋಧಿಸಿದಾಗ ಕೆಟ್ಟದಾಗಿ ಮಾತಾಡ್ತಾರೆ.. !
ಆಕೆಯ ದುಖದ ಮೂಲ ಅವಳಾಗಿರಲಿಲ್ಲ ನಾನು ಆಗಿದ್ದೆ . ನನ್ನ ಬಗ್ಗೆ ಆ ವ್ಯಕ್ತಿ  ಮಾತನಾಡಿದ ರೀತಿಗೆ ಅವಳಿಗೆ ನೋವಾಗಿತ್ತು.. ನೋಡು ನಿನ್ನೆ ಒಬ್ಬರಿದ್ದರೆ, ಇಂದು ನಾನು ನಾಳೆ ನೀನು.. ಒಟ್ಟಿನಲ್ಲಿ ತಮ್ಮ ಮೂಗಿನ ನೇರಕ್ಕೆ ನಡೆಯದಿದ್ದರೆ, ಇಲ್ಲವೇ ತಮಗೆ ಯಾರೇ ಆಗಿರಲಿ ಸಹಾಯಹಸ್ತ ನೀಡದೆ ಇದ್ದರೆ ಹೀಗೆ ರಿಯಾಕ್ಟ್ ಮಾಡೋದು ಸಹಜ.. ಅದು ಅವರ ವೀಕ್ ನೆಸ್ . ಅದರ ಬಗ್ಗೆ ಹೆಚ್ಚು ತಲೆಗೆ ಹಾಕಿಕೋ ಬ್ಯಾಡ ಅಂದೇ.. ಅದಕ್ಕೆ ಪೂರಕವಾಗಿ ನನ್ನ ಆಫೀಸಿನಲ್ಲಿ ಒಬ್ಬಾತ ಮುಗ್ಧ ಒರಟ ಇದ್ದಾನೆ. ಹಾಸನದ ಆತನ ಮಾತು ಒರಟು ಆದರೆ ಪಾಪದವ ಒಳ್ಳೆಯವ. ಆತ ಸಂಸ್ಥೆಯನ್ನು ಹಾಳು ಮಾಡಲು ಹೊರಟ 'ಸಂಭಾವಿತ ಕಳ್ಳ' ನನ್ನು ಹಿಡಿದು ಕೊಟ್ಟಿದ್ದಕ್ಕೆ ಆ ಕಳ್ಳ ಈ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡೋಕೆ ಆರಂಭಿಸಿದ್ದಾನೆ.. ಅದನ್ನು ಹೇಳುತ್ತಾ ಆತ ಬೇಸರ ಮಾಡಿಕೊಂಡ.. ಹೀಗೆ ಮಾಡೋವರನ್ನು ಕೈಲಾಗದವರು....  ! :-)

Followers