Sunday, 3 February 2013

ಪ್ರೇಮ ?



ಹೇಳುವ ಮಾತುಗಳು ಸಾವಿರ ಇದ್ದರೂ
ನಿನ್ನ ಒಂದು ನೋಟ 
ಲಕ್ಷ ಮಾತುಗಳನ್ನು ಹೇಳಿತು,
ನನ್ನ ಮೌನ ಕೋಟಿ
ಭಾವನೆಗಳನ್ನು ತಿಳಿಸಿತು..
ಏನನ್ನಲಿ ಇದನ ಪ್ರೀತಿ, ಪ್ರೇಮ ?

******
ಎಷ್ಟು ನಿಜ ನಿನ್ನ ನೆನಪು ,
ಅದೆಷ್ಟು ನಿಜ ನೀ ಕೊಟ್ಟ ನೋವು ನಿಜ 
ಅನ್ನುವ ವಾದದಲ್ಲಿ ಸುಳ್ಳಿನ ಸಂಬಂಧವು
ಮತ್ತೆ ಜೀವ ತಳೆಯಿತು
ನಿಜ ನಿಜ ನೀನೆಷ್ಟು ಸುಳ್ಳು..




Monday, 10 December 2012

ನೀನಿಲ್ಲ



ನನ್ನ ಅಸಹನೆ ತುಮುಲಗಳ ಬಿಸಿಲ ನಾಡಲ್ಲಿ 
ನಿನ್ನ ನಗೆಯ ನೆನಪು ಹಾಯಿ ತಂಗಾಳಿ..
ನೆನಪು ಸುಂದರ,ಗತದಷ್ಟೇ ಚಲುವ..
ನಿನ್ನೆಯು ಇಂದಾಗ ಬಾರದಾಗಿತ್ತೆ ಅನ್ನುವ ಆಶಯ 
ನೀನು  ತೊರೆದ  ಕ್ಷಣವೇ ಅದು ಮರೀಚಿಕೆ 
ಆ ಮಾತು ಮರೆತಿತ್ತು ಆಗ ..!
ಈಗ ಪದೇಪದೇ  ನೆನಪಿಗೆ ಬರುತಿದೆ 
ಯಾಕೆಂದ್ರೆ ನೀನಿಲ್ಲ ನಲ್ಲ !

Sunday, 9 December 2012

ಇಷ್ಟ

ಕೆಲವು ಬರಹಗಳು ಹೆಚ್ಚು ಆಪ್ತ ಅನ್ನಿಸೋಲ್ಲಾ.. ಪ್ರಾಯಶಃ  ನಾನು ನಿರೀಕ್ಷಿಸಿದ ಸಂಗತಿಗಳು, ಮಾಧುರ್ಯ ಅದರಲ್ಲಿ ಇರದೇ ಹೋಗಿರುವುದು ಒಂದು ಕಾರಣ ಇರಬಹುದು, ಇಲ್ಲವೇ ಅದರಲ್ಲಿನ ಸತ್ಯಗಳನ್ನು ಅರಗಿಸಿ ಕೊಳ್ಳುವುದಕ್ಕೆ ಸಾಧ್ಯ ಆಗದೆ ಇರುವುದು ಒಂದು ಮುಖ್ಯ ಸಂಗತಿ ಆಗಿರ ಬಹುದು. 
ಚಂದಮಾಮ ಓದುವ ಖುಷಿಯಲ್ಲಿ ಓದಿನ ಸವಿ ಈವರೆಗೂ ಕಡಿಮೆ ಆಗಿಲ್ಲ.. ಅನೇಕ ಫ್ಯಾಂಟಸಿ ಒಳಗೊಂಡ ಕಥೆಗಳು, ಅದರಲ್ಲೂ ಸುಂದರ ಏಳು ಮಲ್ಲಿಗೆ ತೂಕದ ರಾಜಕುಮಾರಿ ಕಥೆ ತುಂಬಾ ದಿನ ಮನದಲ್ಲಿ ಸಣ್ಣ ಖುಷಿಯ ಪುಳಕ ನೀಡಿತ್ತು. ಓದುವ ಹವ್ಯಾಸ ಅಮ್ಮನದ್ದು,ಅವರು ಬಾಲ್ಯದಲ್ಲೇ ದೊಡ್ಡ ದೊಡ್ಡ ಕಾದಂಬರಿ ಓದಿ ಜೀರ್ಣಿಸಿಕೊಂಡವರು .ಅದರ ಬಗ್ಗೆ ನನ್ನಜ್ಜಿ ಬಳಿ ಹೇಳ್ತಾ ಇರೋರು. ಅವರನ್ನು ಹೆಚ್ಚು ಕಾದಿದ್ದು ಭೈರಪ್ಪನವರ ಪರ್ವ.ಹೀಗೂ ಉಂಟೆ ಅನ್ನುವ ಅವರ ಆ ಭಾವ ಚಂದಮಾಮನ  ಕಥೆಯ ನನಗೆ ಅರ್ಥ ಆಗಿರಲಿಲ್ಲ..
ಬಳಿಕ ಕಾರಂತರು, ಕುವೆಂಪು, ಮಾಸ್ತಿ,ಭೈರಪ್ಪನವರು ಮಾತ್ರವಲ್ಲದೆ ಬರಗೂರು,ಕುಂ.ವೀ.,ದೇವನೂರು ಮಹಾದೇವ , ಅರವಿನದ ಮಾಲಗತ್ತಿ.. ಇಷ್ಟ ಆಗೋಕೆ ಆರಂಭಿಸಿತು.
ಇವುಗಳ ಜೊತೆಗೆ ಉಷಾ ನವರತ್ನ ರಾಮ್ , ಭುವನೇಶ್ವರಿ ಹೆಗಡೆ, ಎಂ.ಕೆ.ಇಂದಿರಾ ಅವರ ಬರಹಗಳು ಖುಷಿ ಕೊಟ್ಟಿತ್ತು.
ಎಂ.ಕೆ.ಇಂದಿರಾ ಮಾಡಿದಷ್ಟು ಮೋಡಿ ... ಬೇರೆ ಸ್ತ್ರೀ ಬರಹಗಾರ್ತಿಯರು  ಮಾಡಲಿಲ್ಲ.ಅವರ ಸರಳ ಕನ್ನಡ, ಆರಾಮವಾಗಿ ಅರ್ಥ ಆಗುವ ವಿಷಯ ಎಲ್ಲವೂ ಸುಂದರ..ಅದೇ ರೀತಿ ಹೆಚ್ಚು ಖುಷಿ ಕೊಟ್ಟವರು ದೇವನೂರು ಮಹಾದೇವ..ವಾಸ್ತವತೆಯ ಸ್ಪಷ್ಟ ಚಿತ್ರಣ 

ಕೇವಲ ಕನ್ನಡವಲ್ಲ ತೆಲುಗು, ಹಿಂದಿ, ಆಂಗ್ಲ. ಸಾಹಿತ್ಯದ ಮಜಾ ಸಿಕ್ತಾ ಹೋಯ್ತು.. ನನಗೆ ಆಪ್ತ ಅನ್ನಿಸಿದ ಬರಹಗಾರರಲ್ಲಿ  ಪತ್ತೇದಾರಿ ಬರಹಗಾರ ಟಿ .ಕೆ. ರಾಮರಾವ್ ಒಬ್ಬರು .ಪತ್ತೆ ಮಾಡ ಬೇಕಾದ ಸಂಗತಿಗಳು ಸಖತ್  ಕುತೂಹಲ ಮೂಡಿಸ್ತಾನೆ ಇರೋದು. ಒಟ್ಟಾರೆ ನಾವೇ ಪತ್ತೆದಾರರು ಆಗುವಂತೆ ಮಾಡುವ ಬರಹ ಶೈಲಿ..ಶರ್ಲಾಕ್ ಹೋಮ್ಸ್, ಅಗಾಥ ಕ್ರಿಸ್ಟಿ ..ವಾವ್ 
ಹೆಚ್ಚು ಸಣ್ಣ ಕಥೆಗಳನ್ನು ಓದುವುದು ನಾನು..ಲೇಖನಗಳು ಅಷ್ಟೇ ಸರಳವಾಗಿ ಇರ ಬೇಕು..! ಆ ನಿಟ್ಟಿನಲ್ಲಿ ಜಿ.ಎನ್ .ಮೋಹನ್, ವಿಶ್ವೇಶ್ವರ ಭಟ್ಟರು ಪ್ರೇಂ ಶೇಖರ್ ...........ಲಿಸ್ಟ್ ದೊಡ್ಡದು :-) ರವಿ ಬೆಳಗೆರೆ ಬರೆಯುವ ಶೈಲಿ ,ವಿವರಿಸುವ ರೀತಿ, ಹೇಳುವ ಭಾವ ಇಷ್ಟ ಆಗುತ್ತದೆ.ಅದೇ ರೀತಿ ಅನಂತ್ ಚಿನಿವಾರ್..ಜೋಗಿ ಬರಹಗಳು ಹಲಸಿನ ಹಣ್ಣಂತೆ  ಓಡುತ್ತಾ ಹೋದಂತೆ ಸಿಹಿಸಿಹಿ ತಿರುಳು..!


Saturday, 18 August 2012

ನೆನಪಿಸಿಕೋ ಒಮ್ಮೆಯಾದರೂ !



Saturday, 4 December 2010

ಸೈಲೆಂಟ್ ಕಿಲ್ಲರ್

ಹೇಯ್ ಚಿನ್ನಾ,
ಹೇಗಿದ್ದಿಯೇ ಚೆಲುವೆ? ಕೋಪದ ಬಂಗಾರಿ ಸಿಟ್ಟು ಎಲ್ಲಿವರೆಗೂ ಬಂದಿದೆ, ನಿಮ್ಮ ಮನೆ, ನಮ್ಮ ಮನೆ, ಊರ ಆಚೆ? ಸಾಕೆ ಚಿನ್ನ ಈ ಮುನಿಸು. ನಿನ್ನನ್ನು ಸಮಾಧಾನ ಮಾಡಲು ಎಷ್ಟು ಕಷ್ಟ ಪಡ್ತಾ ಇದ್ದೀನಿ? ನಂಬೆ ನನ್ನನ್ನು, ಈ ಮೇಲ್ನಲ್ಲಿ ಕಳಿಸಿರುವ  ನವಿಲುಗರಿ ನಾನು ಕಷ್ಟಪಟ್ಟು ಸರ್ಫ್ ಮಾಡಿ ಸೇವ್ ಮಾಡಿದ್ದು ಕಣೆ, ನೋಡು  ನಿನಗೋಸ್ಕರ ನಾನೆಷ್ಟು ರಿಸ್ಕ್ ತಗೋತೀನಿ. ಛಿ ಇನ್ನು ನಿನ್ನ ಮುಖದಲ್ಲಿ ನಗು ಬರಲಿಲ್ವ? ಹಲೋ ಇಂಟರ್ ನೆಟ್ ನಲ್ಲಿ  ಸರ್ಫ್ ಮಾಡೋದು ತುಂಬಾ ಕಷ್ಟ ಕಣಮ್ಮ ನಾನು ನವಿಲುಗರಿ ಹುಡುಕಿದರೆ ನವಿಲುಗರಿಯಂತಹ ಫೋಟೋ ಸಿಕ್ತು.. ಪ್ಲೀಸ್ ತಗೊಳ್ಳೇ..!
ಛಿ! ರಾಕ್ಷಸಿ ಎಷ್ಟು ಕೋಪ ನಿನಗೆ.. ನೋಡು ಹೀಗೆ ಕೋಪ ಮಾಡಿ ಕೊಂಡಿದ್ರೆ ನಿಮ್ಮ ಮನೆ ಮುಂದೆ ನಿಂತು ಜೋರಾಗಿ ಹಾಡ್ತೀನಿ ಅಷ್ಟೆ !ಗೊತ್ತಲ್ಲ ನಿನಗೆ ನನ್ನ ಕ೦ಠದ  ಕಥೆ. ಏಯ್ ನೋಡು ಈಮೇಲ್ ನೋಡಿದ ತಕ್ಷಣ ಪ್ಲೀಸ್    ನಮ್ಮ ಪ್ರೀತಿಯ ಜಾಗಕ್ಕೆ ಬಂದು.. ಹಾಯ್ ಹಾಯ್ ! ನಾಟಕ ಅಲ್ಲ ನನ್ ಬಂಗಾರಿ ಈ ನಿನ್ನ ಹುಡುಗನ ಹೃದಯ ಚಡಪಡಿಸಿ ಒದ್ದಾಡಿದ್ದು ಹೀಗೆ ಅಂತ ನಾನು ತಿಳಿಸ್ತಾ ಇದ್ದೀನಿ. ಎದುರು ಇದ್ದಿದ್ದರೆ ನನ್ನ ನೋವು ನಿನಗೆ ಅರ್ಥ ಆಗ್ತಾ ಇತ್ತು. ಮೂರು  ದಿನದಿಂದ ಮೆಸೇಜ್ ಇಲ್ಲ , ಕಾಲ್  ರಿಸೀವ್  ಮಾಡುವ ಗೋಜಿಗೆ ಹೋಗಿಲ್ಲ.. ಅಯ್ಯೋ ಪ್ರೀತಿ ಅಂದ್ರೆ ಇಷ್ಟು ಕಷ್ಟನಾ ಹೇಯ್ ಸೈಲೆಂಟ್ ಕಿಲ್ಲರ್  ! ಪ್ಲೀಸ್ ಸಿಕ್ಕೆ...!
ನಿನ್ನವ  ದೇವರಾಣೆ!
ಪೆದ್ದ...
ನೀನು ಕಳುಹಿಸಿದ   ನವಿಲುಗರಿ ಸೇಫಾಗಿ ನನ್ನ ಬಳಿ ಬಂದಿದೆ. ಹಾಗಂತ ನಾನು ಹೇಳಲ್ಲ, ಯಾಕಂದ್ರೆ ನನಗೆ ಈಗ ನಿನ್ನ ಜೊತೆ ಮಾತಾಡೋಕೆ ಇಷ್ಟ ಇಲ್ಲ, ಅಯ್ಯೋ ನಿಜಾನ ಹುಡ್ಗಾ? ಇಲ್ಲ ದೊರೆ ನನಗೆ ನಿನ್ನನ್ನು ಬಿಟ್ಟು ಇರೋಕೆ ಆಗೋಲ್ಲ, ನೀನು ನನ್ನನ್ನು ಸೈಲೆಂಟ್ ಕಿಲ್ಲರ್ ಎಂದು ಕರೆದಿದ್ದಿಯಾ ಹೌದು ನಾನು ಕಿಲ್ಲರ್ ಆದ್ರೆ ನನ್ನನ್ನು ನಾನು ಕಿಲ್ ಮಾಡಿ ಕೊಳ್ತಾ ಇದ್ದೀನಿ. ನಾನು ಯಾಕೆ ಮೌನವಾಗಿದ್ದಿನಿ ಅಂತ ಹೇಳೋಕೆ ಆಗದಷ್ಟು  ದುಃಖದಲ್ಲಿದ್ದೇನೆ.ಬಿಡು ಬಿಡು ನೀನು ಸಹ ಇತ್ತೀಚೆಗೆ ಕಂಪ್ಯುಗೆ ಅಟಾಕ್ ಮಾಡುವ ವೈರಸ್ ಥರ  . ನೀನು  ಅವತ್ತು ನನ್ ಫ್ರೆಂಡ್ಸ್ ಮುಂದೆ ನಾನ್ಯಾರೋ ಗೊತ್ತೇ ಇಲ್ಲ ಅನ್ನುವಂತೆ ಆ ಟಿಪ್ಪಿಗೆ ಪಾರ್ಟಿ ಕೊಡಿಸಿದೆಯಲ್ಲ ಅದೇ ಕಣೋ ಲಾಸ್ಟ್ ನಿನ್ನ ಕಡೆ ಕಣ್ಣೆತ್ತಿ ನೋಡ ಬಾರದು ಅಂತ ನಿರ್ಧಾರ ಮಾಡಿದೆ. ಬೇಜಾರಗಲ್ವ ಹೇಳು ?? ಎಷ್ಟು ಅಳು ಬಂತು ಗೊತ್ತ? ಬಂಟಿ ಹೇಳಿದ ಅಯ್ಯೋ ಅವನು ಬಿಡೆ ಸ್ವಲ್ಪ ಹಾಗೆ ನೀನು ಇದ್ದಾಗ ಒಂದು ಥರ  ಇಲ್ಲದೆ ಇದ್ದಾಗ ಮತ್ತೊಂದು ರೀತಿ, ಮೊದಲೆಲ್ಲ ನೀನು ಇಲ್ಲದೆ ಇದ್ದಾಗ ಮಾತ್ರ ಹೀಗೆ ಬೇರೆ ಹುಡುಗಿಯರ ಜೊತೆ ಓಡಾಡುತ್ತಾ ಇದ್ದ, ಈಗ ನೋಡಿದ್ರೆ ನೀನು ಇದ್ದಾಗಲೇ... ಹಾಗೆಲ್ಲ ಕೇಳಿದಾಗ ಬೇಜಾರಾಗಲ್ವ? ಹೇಳು! ಹೋಗ್ ಯಾರೂ ಬೇಡ ನನಗೆ, ನಾನೊಬ್ಲು ಒಂಟಿ. ನೀನು ಯಾರ ಜೊತೆ ಬೇಕಾದ್ರೂ ಓಡಾಡು, ನನ್ನನ್ನು ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ  ಅಂತ ಹೇಳಿದ್ರೂನೂ  ಪರವಾಗಿಲ್ಲ ನಾನು ನನ್ನ ಥರಾನೆ ಇರ್ತೀನಿ  ಹಾಗಂತ ನಿರ್ಧಾರ ಮಾಡಿದ್ದೆ, ಆದ್ರೆ ನಿನಗೆ ತುಂಬಾ ಜ್ವರ ಅಂತ ಕೇಳಿದಾಗ ನನ್ನ ಹೃದಯ ಹಿಂಡಿ ಹೋಯ್ತು, ಹೇಗಿದ್ದೀಯ ಎಂದು ಕೇಳೋಕೆ ಸಂಕೋಚ ,ಅದಕ್ಕೆ ಸುಮ್ಮನಾದೆ, ಮೇಜ್-ಕಾಲ್ಗೆ ಉತ್ತರ ಕೊಡದೆ ಇದ್ದೆ ಅಲ್ವ ಅದಕ್ಕೆ ನನಗೆ ನನ್ನ ಬಗ್ಗೆ ಎಷ್ಟು ಬೇಜಾರಾಗಿದೆ..!!  ನಿನ್ನ ನವಿಲುಗರಿ ಸಿಕ್ಕಿದೆ ಕಣೋ... ನೀನು ನಿಜವಾದದ್ದು ಕೊಡದೆ ಇದ್ರು  ಲವ್  ಯು !
ನೀನು ಹಾಡು ಹಾಡುವುದಕ್ಕೆ ಮುಂಚೆ ನಿನ್ನ ಹತ್ರ ಓಡೋಡಿ ಬರ್ತೀನಿ
ನಿನ್ನ ಸೈಲೆಂಟ್ ಕಿಲ್ಲರ್

Saturday, 7 August 2010

ನಮ್ ಯಜಮಾನರು ಕಾಣೆಯಾಗಿದ್ದಾರೆ !


ಹೆಣ್ಣು ಮಗಳೊಬ್ಬಳು ಪೊಲೀಸ್  ಸ್ಟೇಶನ್ಗೆ  ದೂರು ಕೊಡಲು ಹೋಗ್ತಾಳೆ ಅದರ ವಿವರ ಹೀಗಿದೆ.....
ಹೆಂಗಸು :- ಸರ್ ನನ್ನ ಪತಿ ಕಾಣೆಯಾಗಿದ್ದಾರೆಇನ್ಸ್ ಪೆಕ್ಟರ್ :- ಅವರು ಎಷ್ಟು ಎತ್ತರವಾಗಿದ್ದಾರೆಹೆ0:- ಹುಮ್ ! ಗಮನಿಸಿಲ್ಲ !ಇ :- ಸಪೂರ ಅಥವಾ ಆರೋಗ್ಯ?ಹೆ೦:- ಅಪ್! ಅದು ಅಷ್ಟು  ಗೊತ್ತಿಲ್ಲ , ಆರೋಗ್ಯವಾಗಿರ ಬಹುದು. ಇ:- ಕಣ್ಣಿನ ಬಣ್ಣ? ಹೆ0 :-ಇಲ್ಲ ಗಮನಿಸಿಲ್ಲ ಇ:- ಹೋಗ್ಲಿ ಅವರ  ಕೂದಲ ಬಣ್ಣ ?ಹೆ೦:-ಕಪ್ಪಗಿದ್ದರೂ ಇರಬಹುದು .ಇ:- ಅವರ ಉಡುಪಿನ   ಬಣ್ಣ , ಏನು ಧರಿಸಿದ್ದರು ಹೆ೦:- ಅಯ್ಯೋ ! ಜ್ಞಾಪಕ ಇಲ್ಲ ಇ:-.ಹೋಗ್ಲಿ ಅವರ ಜೊತೆ ಬೇರೆ ಯಾರಾದ್ರೂ ಇದ್ರ ???ಹೆ೦:-ಹೌದು ನನ್ನ ಪ್ರೀತಿಯ ನಾಯಿ ಇತ್ತು. ಲ್ಯಾಬ್ರಡಾರ್  ನಾಯಿ ರೋಮಿಯೋ , ಅದಕ್ಕೆ ಚಿನ್ನದ ಚೈನ್ ಹಾಕಿತ್ತು,ಎತ್ತರ 30  ಇನ್ಚ್ಗಳು,ಆರೋಗ್ಯವಾಗಿತ್ತು,ನೀಲಿ ಬಣ್ಣದ ಕಣ್ಣು, ಕಪ್ಪುಕಂದು ಮಿಶ್ರಿತ ಕೂದಲು,ಅದರ ಎಡ ಭಾಗದ ಹೆಬ್ಬರಿಲಿನ ಉಗುರು ಸ್ವಲ್ಪ ಮುರಿದಿಎ. ಅದೂ ಎಂದಿಗೂ ಕಚ್ಚೆ ಇಲ್ಲ.ಚಿನ್ನದ ಬಣ್ಣದ ಬೆಲ್ಟ್ ಅದಕ್ಕೆ   ತೊಡಿಸಿದೆ. ಅದರಲ್ಲಿ ನೀಲಿ  ಬಣ್ಣದ ಮಣಿಗಳನ್ನು ಅಂಟಿಸಿದೆ. ಅದಕ್ಕೆ ಮಾಂಸಾಹಾರ ಅಂದ್ರೆ   ತುಂಬಾ  ಇಷ್ಟ .ನವ್ವು ಒಟ್ಟಿಗೆ ಊಟ ಮಾಡ್ತಾ ಇದ್ವಿ ...ಹೀಗೆ ಹೇಳ್ತಾ ಹೇಳ್ತಾ ಆಕೆ ಜೋರಾಗಿ ಆಳುವುದಕ್ಕೆ ಆರಂಭಿಸಿದಳು. 
ಇನ್ಸ್ಪೆಕ್ಟರ್ :-ಮೊದಲು ನಾನು ನಿಮ್ಮ  ನಾಯಿ ಮರಿಯನ್ನು ಹುಡುಕಲು ಹೊರಡ್ತೀನಿ ....!!!

Tuesday, 27 July 2010

ತಪ್ಪು ತಪ್ಪು :-)

ತಪ್ಪು ಮಾಡುವುದು ಸಹಜ. ಆದರೆ ಕೆಲವರಿಗೆ ತಪ್ಪು ಮಾಡಿದರೂ ಶಿಕ್ಷೆ ಇರಲ್ಲ.ಹೀಗೊಂದು ಊರು ಅಲ್ಲಿ ಒಂದು ಅತ್ತೆ , ಆಕೆಗೊಬ್ಬ ಮಗ, ಆತನಿಗೆ ಮುದ್ದಾದ ಹೆಂಡತಿ. ಅತ್ತೆಗೆ ಸೊಸೆಯನ್ನು ಕಂಡ್ರೆ ಪ್ರೀತಿನೆ, ಆದ್ರೆ ಆಕೆಗೆ ತನ್ನ ಹಿರೀಕತನಕ್ಕೆ  ಧಕ್ಕೆ ಬಂದ್ರೆ ಎಂದಿಗೂ ಸಹಿಸ್ತಾ ಇರಲಿಲ್ಲ. ಸೊಸೆ ಅಪ್ಪಿತಪ್ಪಿ ನೀರು ಚಲ್ಲಿದರೂ ಬೈಗುಳ, ಅದೇ ಅತ್ತೆ ಎಣ್ಣೆ ಚಲ್ಲಿದ್ರೂ ತಪ್ಪಿಲ್ಲ, ಅದೂ ಕೈಜಾರಿದ್ದು ಬೇಕೂ ಅಂತ ಮಾಡಿದ್ದಲ್ಲ.ಒಟ್ಟಿನಲ್ಲಿ ಅತ್ತೆಗೊಂದು ನ್ಯಾಯ ಸೊಸೆಗೊಂದು,ಅದಕ್ಕೆ ಅತ್ತೆ ಒಡೆದ ಮಡಿಕೆ ಅನ್ನುವ ಮಾತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಜಾರಿಯಲ್ಲಿದೆ.ಅಂತಹುದೇ ಮಿಸ್ಟೇಕ್ ಕೆಲವರು ಮಾಡಿದ್ರೆ ಎಂದಿಗೂ ಅದು ತಪ್ಪಾಗಿ ಕಾಣಲ್ಲ ,ಅಂತಹ ಕೆಲವು ಮುದ್ದಾದ ತಪ್ಪುಗಳು ಇಲ್ಲಿವೆ ....
# ಬಾರ್ಬರ್ ಕೂದಲು ಕತ್ತರಿಸುವಾಗ ತಪ್ಪಾದರೆ ಅದು ಹೊಸ  ಹೈರ್ ಸ್ಟೈಲ್
#ಡ್ರೈವರ್ ಗಾಡಿ ನಡೆಸುವಾಗ ದಾರಿ ತಪ್ಪಿದರೆ ಅದೂ ಹೊಸ ದಾರಿ ಕಂಡು ಹಿಡಿದದ್ದು
#ಎಂಜಿನಿಯರ್ ಮಾಡಿದ ತಪ್ಪು ಹೊಸ ಸಾಹಸ
#ಪೋಷಕರು ಮಾಡಿದ ತಪ್ಪು ಹೊಸ ಜನರೇಶನ್
# ರಾಜಕಾರಣಿ ಮಾಡಿದ ತಪ್ಪು ಹೊಸ ಕಾನೂನು
#ವಿಜ್ಞಾನಿಯ ತಪ್ಪು ಹೊಸ ಅನ್ವೇಷಣೆ
#ಟೈಲರ್ ಮಾಡಿದ ತಪ್ಪು ಹೊಸ ಫ್ಯಾಶನ್
#ಗುರುಗಳು ಮಾಡಿದ ತಪ್ಪು ಹೊಸ ಸಿದ್ಧಾಂತ
#ಬಾಸ್ ಮಾಡಿದ ತಪ್ಪು ಹೊಸ ಐಡಿಯ
# ಸ್ನೇಹಿತ  ಮಾಡಿದ ತಪ್ಪು ಅದ್ಭುತ ಸಾಹಸ
#ಆದರೆ ಅದೇ ತಪ್ಪು ಕಾರ್ಮಿಕ-ಕೆಲಸಗಾರ ಮಾಡಿದಾಗ ಮಾತ್ರ ತಪ್ಪು ತಪ್ಪು ತಪ್ಪು :-)
( ಅಕ್ಕನಂತಹ ಗೆಳತಿ ಶಿವೆ ಕಳುಹಿಸಿದ ಮೇಲ್ )

Followers