Tuesday, 31 March 2009

ಚಿತ್ತು-ಚಿತ್ತಾರ ಇಲ್ಲ..!

ಗೆಳೆಯ...
ಗೊತ್ತು ನಂಗೆ ನೀನೂ ಈ ನನ್ನ ಮೇಲ್ ನೋಡಿದ ತಕ್ಷಣ ಪೆಚ್ಚಾಗಿ ಬಿಡ್ತಿಯಾಂತ.ಆದರೆ ನಾನು ಎಂದು ಮೇಲ್ ಮಾಡ್ತೀನಿ,ಯಾವಾಗ ಮೌನಾಗಿ ಕೂರ್ತೀನಿ ಅನ್ನುವ ಸಂಗತಿ ನನಗಿಂತ ನಿನಗೆ ಹೆಚ್ಚು ಗೊತ್ತಿದೆ ಅಂತ ಅಂದುಕೊಂಡಿದ್ದೇನೆ.ಪ್ಲೀಸ್ ಆ ನನ್ನ ನಂಬಿಕೆಯನ್ನು ಸುಳ್ಳು ಮಾಡ ಬೇಡ.ನನ್ನದೇನಿದ್ದರು ನೇರ ನುಡಿ,ನೇರ ವರ್ತನೆ.ಮೊಟ್ಟಮೊದಲು ನಿನ್ನನ್ನು ಕಂಡಾಗ ನಾನೇ ತಾನೆ ನಿನಗೆ ಪ್ರಪೋಸ್ ಮಾಡಿದ್ದು?ಏನ್ ಮಾಡ್ಲಿ ನನಗೆ ಮನಸಿನಲ್ಲಿ ಇಟ್ಟುಕೊಳ್ಳಲು ಬರೋದೇ ಇಲ್ಲ.ಎಲ್ಲವು ಬಯಲಾಗಿ ಬಿಡಬೇಕು.ಪ್ರಾಯಶ: ಆ ವರ್ತನೆ ನಿನ್ನನ್ನು ಹೆಚ್ಚು ಆಕರ್ಷಿತಾ ? ಉಹುಂ ನನಗೆ ಅದು ಗೊತ್ತಿಲ್ಲ.ಜಾಸ್ತಿ ಕೊರೀತಾ ಇದ್ದಿನಾ? ಗೊತ್ತು ನನಗೆ ಬೇರೆ ಯಾವ ವಿಷಯ ನನಗೆ ತಿಳಿದೇ ಇದ್ದರು ಈ ವಿಷಯ ಚೆನ್ನಾಗಿ ಗೊತ್ತು,ನೀನೂ ಪತ್ರವಿಲ್ಲದೆ ದಣಿದು ಬಿಟ್ಟಿದ್ದಿಯಾ ಅಂತ.ಪ್ರತಿದಿನ ಸಿಕ್ಕರೂ ನಾನು ನಿನಗೆ ವಾರಕ್ಕೊಮ್ಮೆ ನನ್ನ ಕೈಬರಹದಲ್ಲಿ ಒಂದು ಪತ್ರ ಬರೆದು ಕೊಡಬೇಕು.ಅದೇನು ತುಂಬಾ ನೀಟಾಗಿ ,ತಪ್ಪಿಲ್ಲದೆ ಇರಬೇಕು ಅಂತ ನೀನೂ ಎಂದಿಗೂ ಅಪೇಕ್ಷೆ ಮಾಡಲ್ಲ.ಪ್ರತಿ ಪತ್ರ ಓದಿದ ನಂತರ ನಿನ್ನ ತುಟಿಯಲ್ಲಿ ಒಂದು ಕಿರುನಗೆ .ಆದರೆ ನನಗೆ ಸಿಟ್ಟು ಬಂದಾಗ ಇಮೇಲ್ ಕಳುಹಿಸಿ ನನ್ನನ್ನು ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೆ.ನೀನೂ ನನಗೆ ಸಮಾಧಾನ ಮಾಡುವವರೆಗೂ ಈ ಕೆಲಸ ಮುಂದುವರೆಯುತ್ತಲೇ ಇರುತ್ತಿತ್ತು.ನಾನು ಎಲ್ಲಾ ಬಗೆಯ ಕೋಪದ ಸುನಾಮಿಗಳನ್ನು ದೂರ ಮಾಡಿ ಹಾಯಾದ ಗುಪ್ತಗಾಮಿನಿ ಮನಸ್ತತ್ವ ಪಡೆದ ಮೇಲೆ ನಿನ್ನ ವಿಶಾಲವಾದ ಅಂಗೈನಲ್ಲಿ ನನ್ನ ಪುಟ್ಟ ಹಸ್ತ ಇಮಡಿಸಿ 'ಮುದ್ದು ಪ್ಲೀಸ್ ಕೋಪ ಮಾಡ್ಕೋ ಪರವಾಗಿಲ್ಲ,ಪ್ರೀತಿಯಲ್ಲಿ ಕೋಪ ಇರಲೇ ಬೇಕು,ಆದರೆ ನನ್ನದೊಂದು ರಿಕ್ವೆಸ್ಟ್ ,ನಿನಗೆ ಎಷ್ಟೇ ಕೋಪ ಬಂದ್ರು ನನಗೆ ನಿನ್ನ ಕೈಬರಹದಲ್ಲಿ ಪತ್ರ ಬರಿ,ಆಮೇಲ್-ಈಮೇಲ್ ಅಂತ ಮಾಡಿ ಕರ್ತವ್ಯ ಮುಗೀತು ಅಂತ ಸುಮ್ಮನಾಗ ಬೇಡ.ಶುದ್ಧ ಅರಸಿಕ ಕಂಪ್ಯೂಟರ್ ಮೇಲ್ .ಕೈ ಬರಹದಲ್ಲಿ ಇರುವಂತೆ ಎಲ್ಲು ಚಿತ್ತು ,ಚಿತ್ತಾರ ಇರಲ್ಲ. ಸಣ್ಣ ಅಕ್ಷರ,ದಪ್ಪ ಅಕ್ಷರ,ಅಲ್ಲೆಲ್ಲೋ ದಾರಿ ತಪ್ಪಿದ ವಾಕ್ಯ,ಸ್ವಲ್ಪ ಗ್ರಾಮರ್ ಮಿಸ್ಟೇಕ್,ಮಧ್ಯೆ ನಿನ್ನ ಮೂಡ್ಗೆ ತಕ್ಕಂತೆ ರಂಗೋಲಿ,ಏನಿರುತ್ತೆ ಇಲ್ಲಿ,ಎಲ್ಲವು ಒಪ್ಪ.ಬ್ಯಾಡ ಕಣೆ ಬಂಗಾರಿ ನನಗೆ ಅಂತಹ ಪತ್ರ !ಪ್ಲೀಸ್..ಪ್ಲೀಸ್..! ಈ ವಿಷಯದಲ್ಲಿ ಕರುಣೆ ತೋರು' ಅಂತ ಹೇಳಿರ್ತೀಯಾ,ಆದರೆ ಕೋಪ ಬಂದಾಗ ನನ್ನದು ಮತ್ತದೇ ಇಮೇಲ್ ಗಲಾಟೆ.ಈ ಬಾರಿ ನನಗೆ ಯಾಕೆ ಕೋಪ ಬಂದಿದೆ ಅಂತ ನನ್ನನ್ನೇ ನೀನೂ ಕೇಳ್ತಿಯಾ? ನನಗೆ ಗೊತ್ತಿಲ್ಲ.ಆದರೆ ನಿನ್ನ ಮೇಲೆ ಸಿಟ್ಟು ಬಂದಿದೆ ಅಷ್ಟು ಮಾತ್ರ ಹೇಳಬಲ್ಲೆ.
ನಿನ್ನ ಗೆಳತಿ

Followers