Saturday, 5 December 2009

ಪದೇಪದೆ ನೆನಪಾದೆ!

ನಂಗೊತ್ತು ,
ಒಂದು ಹಿಡಿಯಷ್ಟು  ದಿನಗಳು ಬಾಕಿ ಇವೆ... ಅದು ಪೂರೈಸಿದರೆ ನಾವು ಹೃದಯ ಕಿತ್ತು ಬೇರೆಯಾದ ಆ ದಿನಕ್ಕೆ  ಅಮೋಘವಾಗಿ ಒಂದು ವರ್ಷದ ಸಂಭ್ರಮ !
ನಂಗೊತ್ತು,ನೀನಿನ್ನು ನನ್ನ ಮರೆತಿಲ್ಲಾಂತ ! ನಿನ್ನ ಹೃದಯ ಏನೂ ಅಂತ ನಿನಗಿಂತ ನನಗೆ ಚನ್ನಾಗಿ ಗೊತ್ತು , ಅದು ನಿನಗೂ ಗೊತ್ತು! ನಾನು ಪ್ರಾಕ್ಟಿಕಲ್...ನೀನು ಎಮೋಷನಲ್ ! ಸ್ನೇಹಕ್ಕೆ -ಪ್ರೀತಿಗೆ ಇದ್ಯಾವುದು ಬೇಕಾಗಿರಲಿಲ್ಲ! ಹೃದಯ ಏನು ಬೇಡುತ್ತಿದೆ ಎಂದು ತಿಳಿಯುವಷ್ಟರಲ್ಲಿ ನಾವಿಬ್ಬರು  ಇಷ್ಟ ಪಟ್ಟಿದ್ದೆವು. ಪೌರ್ಣಿಮೆಯ ಬೆಳದಿಂಗಳೇ ಎಂದು ಕನವರಿಸಿದೆ,ನನ್ನ ಜಾಜಿ ಮಲ್ಲಿಗೆ  ಎಂದು  ಹೊಗಳಿದೆ,ನಮ್ಮ ಪ್ರೀತಿಗೆ ಅಂತಹ ಯಾವ ಅಲಂಕಾರಗಳು ಬೇಕಿರಲಿಲ್ಲ ಅಲ್ವ! ನನ್ನನ್ನು ಒಂದು ಕ್ಷಣವೂ  ಪ್ರೀತಿಸದೆ ಬಿಡಲಿಲ್ಲ,ಪದಗಳಿಗೆ ಅಕ್ಷರವಾದೆ,ನೋಟಕ್ಕೆ ಶಕ್ತಿಯಾದೆ! ಆದರೆ ನೀನು ನನ್ನನ್ನು ಅಷ್ಟೆ ನೋಯಿಸಿದೆ!  ಪ್ರೀತಿಯ ಜೊತೆಗೆ  ನೋವನ್ನು ಮೊಗೆ ಮೊಗೆದು ಕೊಟ್ಟೆ! ಇದಕ್ಕೆ ಉತ್ತರ ?  ಐ ಡೋಂಟ್ ನೋ ವೈ !
ಆ ನೋವು ನೀನ್ಯಾಕೆ ನೀಡಿದೆ  ಅಂತ ನನಗಿಂತ ನೀನು ಬಲ್ಲೆ....ಇಲ್ಲ ಹಾಗಂತ ನಾನು ಹೇಳಲಾರೆ !ನಾನು ನಿನ್ನ ಮರೆತಿದ್ದೀನಿ ಅನ್ನುವ ಭಾವ ನಿನ್ನದು,ನಂಗೊತ್ತು ! ಆದರೆ ನಿನ್ನ ಈ ಭಾವವನ್ನು ಸ್ವೀಕರಿಸುತ್ತಿಲ್ಲ ನಿನ್ನ ಹೃದಯದ ಮೂಲೆಯ ಒಂದು ಭಾಗ! ಹೌದಲ್ವ?! ನಿಜ ತಾನೆ?!
ಹೇಗೆ ಮರೆಯಲಿ ನಿನ್ನನ್ನು ನಾನು? ಮರೆತರೆ ನಾನು ಕಟ್ಟಿದ ರಾಶಿ ಕನಸುಗಳು, ನಿನ್ನ ನೆನಪಿನಲ್ಲಿ ಕಳೆದ ಪ್ರತಿ ಕ್ಷಣವೂ ಸುಳ್ಳಾಗುತ್ತದೆ!  ಪ್ರತಿದಿನ ನಿನಗಾಗಿ ಮೀಸಲಿಟ್ಟ ಆ ಗಳಿಗೆಯಲ್ಲಿ ನನ್ನ ಕೈ  ಮೊಬೈಲ್ ಎತ್ತಿಕೊಳ್ಳುತ್ತದೆ !ಹೆಬ್ಬೆರಳಿಗೆ  ಸಂಭ್ರಮ,ನಿನ್ನ ನಂಬರ್ ಚಕಚಕ! ಉಹುಂ! ಆದರು ನಿನಗೆ ಫೋನ್ ಮಾಡಲಾಗದ ಸ್ಥಿತಿ,ಇದು  ಅಹಂಕಾರ,ದುರಭಿಮಾನ,ದುರಳತನ ಯಾವುದು ಅಲ್ಲ,ಇದು ನನ್ನ ಬದುಕಿನ ನಿಸ್ಸಹಾಯಕತೆ! ನಿನ್ನಲ್ಲಿ ಕೆಳುವುದಿಷ್ಟೇ  ನಿನಗೆ ಎಂದಾದರು ನನ್ನ ನೆನಪಾದರೆ ಯಾಕೆ ಹೀಗಾಯಿತು ಎಂದು ಯೋಚಿಸು....ಸಾಧ್ಯವಾದರೆ!
ದಿನಗಳು  ಕರಗಿಹೋಯ್ತು ಅನ್ನುವ ದುಃಖ ನಿನಗೂ-ಜೊತೆಗೆ ನನಗು ಸಹ! ಇಬ್ಬರಿಗೂ ಗೊತ್ತು ಒಬ್ಬರನ್ನೊಬ್ಬರು ಮಿಸ್ ಮಾಡ್ತಾ ಇದ್ದೀವಿ ಅಂತ! ಆದರು ಇಬ್ಬರು ಅದ್ಯಾವುದೋ ಅರಿಯದ ಧೂರ್ತ ಮೌನದ ಕೋಟೆಯೊಳಗೆ  ಬಂಧಿಗಳು!
ಇಂದ್ಯಾಕೋ ಪದೇಪದೆ ನಿನ್ನ ನೆನಪು ಕಾಡುತ್ತಿದೆ ನನಗೆ,ನಿನಗೆ  ನನ್ನ ನೆನಪು ಉಳಿದಿದೆಯೇ ?! ಇದರ ಉತ್ತರ ನನಗೆ ಗೊತ್ತಿಲ್ಲ...ನಿನಗೆ ????
ನಾನು 

1 comment:

Followers