Friday 25 July 2014

ಮಗು..ನನಗಾದಂತೆ..ತೊಂದರೆ ಆಗದಿರಲಿ



ತಂದೆ ತಾಯಿ ತಮ್ಮಪಾಡಿಗೆ ತಾವು ಬದುಕಿದ್ದರು. ಒಂದು ದಿನ ಅಪ್ಪ ಮರಣಿಸಿದ. ಅಮ್ಮನನ್ನು ಸಾಕಲಾಗದಷ್ಟು ಹೃದಯಹೀನ ಆಗಿದ್ದ  ಶ್ರೀಮಂತ ಮಗ ತಂದೆಯ ಕ್ರಿಯಾಕರ್ಮಗಳು ಮುಗಿದ ನಂತರ  ಆಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ. ಸಾಕಷ್ಟು ಸಮಯ ಕಳೆಯಿತು. ಒಂದು ದಿನ ಆಶ್ರಮದಿಂದ ಕರೆ ಬಂತು. ಆತನ ತಾಯಿಯ ಸ್ಥಿತಿ ಗಂಭೀರವಾಗಿತ್ತು. ಆಕೆ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದರು . ಸರಿ ಮಗ ಹೊರಟ. ಅಲ್ಲಿ ಮಲಗಿದ್ದ   ಹಣ್ಣುಹಣ್ಣು ಅಮ್ಮ ಮಗನನ್ನು ಕಂಡೊಡನೆ ಹತ್ತಿರ  ಕರೆದರು.

ಮಗು  ಈ ಕೋಣೆಯಲ್ಲಿ ಫ್ಯಾನ್ ಇಲ್ಲ. ಸಿಕ್ಕಾಪಟ್ಟೆ ಸೊಳ್ಳೆಗಳು ಕಚ್ಚಿ ಸಾಯಿಸ್ತಾ ಇದೆ. ಅದೇ ರೀತಿ ಇಲ್ಲಿ ನೀಡುವ ಆಹಾರ ಸಹ ಸುಮಾರಾಗಿದೆ. ಏನೋ ಒಂದು ಮುಖದ ಮೇಲೆ ಬಿಸಾಡಿಬಿಡ್ತಾರೆ. ನೀನು ಹೇಗಾದ್ರು ಸಮಯ ಮಾಡಿಕೊಂಡು   ಬಾ ಇಲ್ಲಿರುವ ಎಲ್ಲಾ ಕೋಣೆಗಳಿಗೂ ಫ್ಯಾನ್ ಹಾಕಿಸು. ಅದೇರೀತಿ ಆಶ್ರಮದವರ ಜೊತೆ ಮಾತಾಡಿ ಸರಿಯಾದ ಊಟದ ವ್ಯವಸ್ಥೆ ಮಾಡು.

ಹೀಗೆ ಹೇಳುತ್ತಾ ಸಾಗಿದ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ತಾಯಿಯನ್ನು ಕಂಡು ಮಗನಿಗೆ ಅಚ್ಚರಿ ಆಯ್ತು. ಇಷ್ಟು ದಿನಗಳ ಕಾಲ ಒಂದೇ ಒಂದು ದಿನವು ತನಗಿರುವ ಸಮಸ್ಯೆ ಹೇಳಲೇ ಇಲ್ಲ, ಆದರೆ ಮರಣಿಸುವ ಸಮಯ ಹತ್ತಿರ ಬಂದಾಗ ಈ ರೀತಿಯ ಬೇಡಿಕೆ ಸಲಹೆ ಇಡ್ತಾ ಇದ್ದಾಳಲ್ಲ ಅಮ್ಮ  ಎನ್ನುವ ಆಶ್ಚರ್ಯ ತಡೆಯಲಾಗದೆ ಈ ಮಾತುಗಳು ಯಾಕಮ್ಮ ನನಗೆ ಈಗ ಹೇಳ್ತಾ ಇದ್ದೀಯ ಎಂದು ಕೇಳಿದ. 
ಆಗ ಆಕೆ ನಿಧಾನವಾಗಿ ಮಗನ ಕಡೆ ಹೇಳಿದ ಉತ್ತರವೂ ಎಂದೆಂದಿಗೂ ನೆನಪಲ್ಲಿ ಉಳಿದು ಹೋಯ್ತು.. ಆಕೆ ಹೇಳಿದ್ದಿಷ್ಟೇ

" ಮಗು ನಿನಗೂ ವಯಸ್ಸಾಗುತ್ತಿದೆ. ಸ್ವಲ್ಪ ದಿನಗಳು ಕಳೆದ ಬಳಿಕ ನಿನ್ನ ಮಕ್ಕಳು ಒಂದು ಗುರಿ ತಲಪುತ್ತಾರೆ. ಆಗ ಖಂಡಿತ ಅವರು ನಿನ್ನನ್ನು ಇಲ್ಲಿಗೆ ಸೇರಿಸುತ್ತಾರೆ. ಆಗ ನಿನಗೆ ನನ್ನಂತೆ ತೊಂದರೆ ಆಗ ಬಾರದಲ್ವೆ.. ಅದಕ್ಕೆ ಇಷ್ಟೆಲ್ಲಾ ಹೇಳಿದ್ದು ! "

1 comment:

  1. ಮಕ್ಕಳೇ ಬೇಡ....
    ವೃದ್ಧಾಶ್ರಮಕೆ ನೂಕುವ ಕಟುಕ ಮನಸ್ಸಿನ ಹಲವು ಮಕ್ಕಳನ್ನು ನೋಡಿದ್ದೇನೆ.
    ಉಪವಾಸವಿದ್ದರೂ ಸರಿಯೇ, ನಾನಂತೂ ನನ್ನ ತಾಯಿಯನ್ನು ಕಡೆಗಾಲದವರೆಗೂ ನೋಡಿಕೊಳ್ಳುತ್ತೇನೆ.

    ReplyDelete

Followers