Thursday, 13 August 2009

ಬಾಂಧವ್ಯ ಗಟ್ಟಿ

ಚಿಕ್ಕಂದಿನಲ್ಲಿ ಕೇಳಿದ ಕಥೆ.ಇಷ್ಟವಾದ ಅನೇಕ ಕಥೆಗಳಲ್ಲಿ ಇದೂ ಒಂದು.ಕೆಲವು ಕಥೆಗಳೇ ಹಾಗೆ ಮನದಲ್ಲಿ ಸದಾ ನಳ ನಳಿಸುತ್ತಲೇ ಇರುತ್ತದೆ.ಬಿಡದ ಬಾಂಧವ್ಯ!
ಕೃಷ್ಣ ಸಾಮಾನ್ಯವಾಗಿ ಎಲ್ಲರು ಮೆಚ್ಚುವ ದೇವ.ಆತನ ಲೀಲೆಗಳು ಅಪಾರ.ಶ್ರೀಕೃಷ್ಣನ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ.ಕೆಲವು ಗೊತ್ತು ,ಒಂದಷ್ಟು ಹೀಗೆ ಜನಪದ ಸಾಹಿತ್ಯ.ಪ್ರಾಯಶ: ಇದು ಜನಪದ ಕಥೆ ಇರಬಹುದು ಅಂತ ಕಾಣುತ್ತೆ.ಇರ್ಲಿ ಈಗ ಆ ವಿಷ್ಯ ಅಪ್ರಸ್ತುತ.
ಹೀಗೊಂದೂರು.ಅಲ್ಲಿ ಒಬ್ಬ ಬಡವ ವಾಸ ಮಾಡ್ತಾ ಇದ್ದ.ಆತ ಕೃಷ್ಣ ಭಕ್ತ. ಒಪ್ಪತ್ತು ಗಂಜಿಗೂ ಪರದಾಟ! ಅಂತಹ ವ್ಯಕ್ತಿ ಕಷ್ಟಪಟ್ಟು ದುಡೀತಾ ಇದ್ದ.ಅಕಸ್ಮಾತ್ ಹಣ ಸಿಕ್ಕರೆ ಅದನ್ನು ದಾನ ಮಾಡಿ ಬಿಡುವ ವ್ಯಕ್ತಿತ್ವ.(ಆ ರೀತಿಯ ವ್ಯಕ್ತಿಗಳು ಈಗಿನ ಕಾಲಕ್ಕೆ ಖಂಡಿತ ಹೊಂದಲ್ಲ ಆ ಮಾತು ಬೇರೆ!) .ಆ ಊರಲ್ಲಿ ಇರುವ ಹಣವಂತರು ಕೃಷ್ಣನ ಭಕ್ತರು.ಅವರು ಆ ಕೃಷ್ಣ ಪರಮಾತ್ಮ ಬ್ಯಾಡ ಅಂತ ಅಂದ್ರೂ ಕೇಳದೆ ಯಥೇಚ್ಛವಾಗಿ ನೈವೇದ್ಯಗಳ ಅರ್ಪಣೆ! ಸಮಾಜ ಇರೋದು ಹಾಗೆ ಅಲ್ವ ಬಡ ಮಕ್ಕಳಿಗೆ ಮನೆಯಲ್ಲಿ ಇರೋ ಚಾಕಲೇಟ್ ಕೊಡೋಕೂ ಇಷ್ಟ ಪಡದ ಜನ ಸಿರಿವಂತ ಮಗುವಿಗೆ ಪಿಜ್ಜಾ ತಗೋ ಬರ್ಗರ್ ತಗೋ...! ಅಂತ ಕಾಡಿಸೋದು. ಆ ಕಾಲದಲ್ಲಿ ಪ್ರತಿ ಕೃಷ್ಣಾ ಷ್ಟಮಿಗೂ ಕೃಷ್ಣಪ್ಪ ರಾತ್ರಿ ಭಕ್ತರ ಮನೆಗೆ ಬಂದು ಸ್ವಲ್ಪ ಸ್ವಲ್ಪ ತಿಂಡಿ ತಿನಿಸು ಸ್ವೀಕರಿಸ್ತಾ ಇದ್ದನಂತೆ.ಈ ಬಡವನ ಮನೆಗೆ ಒಂದು ಸರ್ತೀನಿ ಬಂದೆ ಇರಲಿಲ್ಲವಂತೆ.ಈತನ ಪ್ರಿಯ ಪತ್ನಿ ಸತ್ಯಭಾಮಗೆ ಈ ವಿಷ್ಯ ಸಿಟ್ಟು ತರಿಸಿತು,ಅಲ್ಲ ಸ್ವಾಮಿ ನೀನು ಹೀಗೆ ಭಕ್ತಿಗಿಂತ ದುಡ್ಡಿನ ಮುಖ ನೋಡ್ತೀಯಲ್ಲ! ಈ ನಿನ್ ಗುಣ ನನಗೆ ಸ್ವಲ್ಪವೂ ಇಷ್ಟ ಆಗಲಿಲ್ಲ ಅಂತ ಹೇಳಿದಳು.ಆ ಆ ಜಗನ್ನಾಟಕ ಸೂತ್ರಧಾರಿ ನಗುತ್ತ 'ಸತ್ಯ ಆತನ ಮನೆಗೆ ಹೋಗಲು ಕಾಲ ಕೂಡಿ ಬರ ಬೇಕು,ನಾನು ಆತನ ಭಕ್ತಿಯನ್ನು ಪ್ರಪಂಚಕ್ಕೆ ತಿಳಿಸಿ ಹೇಳಬೇಕು ,ಅದಕ್ಕಾಗಿ ಇಷ್ಟು ತಡ ಮಾಡ್ತಾ ಇರೋದು' ಅಂತ ಹೇಳಿ ಬಾಯ್ಮುಚ್ಚಿಸಿದನಂತೆ.ಕೃಷ್ಣ ಹೇಳಿದ ಕಾಲವು ಬಂತು ಆತ ತನ್ನ ಜನ್ಮದಿನದಂದು ಆ ಊರಿಗೆ ಹೋದನಂತೆ.ಎಲ್ಲರ ಮನೆಯಲ್ಲಿಯೂ ತಿಂಡಿ ತಿಂದ ಬಳಿಕ ಆತನಿಗೆ ಬಾಯಾರಿಕೆ ಆಯ್ತಂತೆ.ನೀರನ್ನು ಹುಡುಕುತ್ತ ಹೋದಾಗ ಈ ಬಡವನ ಗುಡಿಸಿಲು ಸಿಕ್ಕಿತಂತೆ,ಪಾಪ ಹೇಳಿಕೇಳಿ ಬಡವ ಈತ,ನೀರನ್ನು ನೈವೇದ್ಯವಾಗಿ ಇಟ್ಟಿರುತ್ತಾನೆ.ಅದನ್ನು ಕಂಡು ಕೃಷ್ಣನಿಗೆ ಸಂತೋಷದಿಂದ ಕುಣಿದಾಡುವಂತೆ ಆಯ್ತಂತೆ.ತಕ್ಷಣ ದೇವನು ನೀರೆತ್ತಿ ಗಟಗಟನೆ ಕುಡಿದು ತನ್ನ ಭಕ್ತನನ್ನು ಆಶೀರ್ವದಿಸಿದನಂತೆ .ಮಾರೆಯ ದಿನ ಈ ಬಡವ ಶ್ರೀಮಂತನಾಗಿದ್ದ.ಊರಿನವರಿಗೆ ಆಶ್ಚರ್ಯ !ಅವರು ಕಾರಣ ಕೇಳಿದಾಗ ತಾನಿತ್ತ ನೀರು ಕೃಷ್ಣನಿಗೆ ಪ್ರಿಯವಾಗಿ ಆತ ನೀಡಿದ ವರದಿಂದ ತಾನು ಶ್ರೀಮಂತನಾದೆ ಅಂತ ಖುಷಿಯಿಂದ ಹೇಳಿದ ಆ ಭಕ್ತ.ಮತ್ತೊಂದು ವರ್ಷ ಬಂತು.ಪುನಃ: ಆ ಕೃಷ್ಣ ಆ ಊರಿಗೆ ಬಂದ ರಾತ್ರಿ ಎಲ್ಲರು ಮಲಗಿದ್ದರೆ,ಆದರೆ ಪ್ರತಿಯೊಬ್ಬ ಭಕ್ತ ನೈವೇದ್ಯಕ್ಕೆ ನೀರನ್ನು ಇಟ್ಟಿದ್ದ! ಪಾಪ ಚಕ್ಕುಲಿ ,ಕೋಡುಬಳೆ ನಿರೀಕ್ಷಿಸಿ ಬಂದಿದ್ದದ ದೇವರಿಗೆ ನೀರು ಕುಡಿದೂ...ಕುಡಿದೂ...! ಸಾಕಾಯ್ತಂತೆ.ಕೊನೆಗೆ ಅದೇ ಕಳೆದ ಬಾರಿ ಸಿರಿವಂತಿಕೆ ನೀಡಿದ್ದ ಆ ಭಕ್ತನ ಮನೆಗೆ ಬಂದಾಗ ಆತ ಸಿಕ್ಕಾಪಟ್ಟೆ ,ವಿಧ ವಿಧ ತಿನಿಸುಗಳನ್ನು ಮಾಡಿ ನೈವೇದ್ಯಕ್ಕೆ ಇಟ್ಟಿದ್ದನಂತೆ.ಕೃಷ್ಣನಿಗೆ ಖುಷಿ ತಡಿಯಲಾಗದೆ ಅಲ್ಲಿ ತಿಂಡಿಗಳನ್ನು ಒಂದು ಬಿಡದೆ ಮುಗಿಸಿ ಇನ್ನೂ ಜಾಸ್ತಿ ಉದ್ದಾರ ಆಗು ಅಂತ ಹರಿಸಿ ಮಾಯ ಆದನಂತೆ.ಮಾರನೆಯ ದಿನ ಈ ಭಕ್ತ ಮತ್ತೂ ಶ್ರೀಮಂತ ಆಗಿದ್ದ.ಇದೆಲ್ಲ ಹ್ಯಾಗಾಯ್ತಪ್ಪ ಅಂತ ಊರವರು ಕೇಳಿದರು.ಆಗ ಆತ 'ಅಯ್ಯಗಳಿರ! ದೇವರು ನಿಮಗೆ ಶ್ರೀರಕ್ಷೆ ಮಾಡೇ ಇದ್ದದ.ನೀವು ಆತ ಇನ್ನು ಕೊಡಲಿ,ಮತ್ತೂ ನೀಡಲಿ ಅಂತ ಆಶಿಸಿದಿರಿ.ಅದು ತಪ್ಪಲ್ಲ.ನೀವು ಯಾರಿಂದಲಾದರೂ ಪಡೆದರೆ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳ ಬೇಕು.ನಿಜ ದೇವರಿಗೆ ಕೊಡಲು ನಾವ್ಯಾರು? ಆ ನಮಗೆ ನೀಡಿದ ಸವಲತ್ತುಗಳ ಬಗ್ಗೆ ನಮಗೆ ಆದಾಗಲೆಲ್ಲಾ ತಪ್ಪದೇ ಕೃತಜ್ಞತೆಯನ್ನು ತಿಳಿಸಬೇಕು,ಅದೂಉತ್ತಮಗುಣಗಳಲ್ಲಿ ಒಂದು.ಆಗಷ್ಟೆ ದೇವರೂ ಸೇರಿದಂತೆ ಮನುಷ್ಯರ ನಡುವೆಯೂ ಸಹ ಬಾಂಧವ್ಯ ಗಟ್ಟಿಆಗುವುದು ಎಂದನಂತೆ ಆ ಭಕ್ತ.

No comments:

Post a Comment

Followers