Saturday 28 December 2013

ಅದೆಷ್ಟು ದಿನಗಳಾಯಿತು? ನಾನು ಲೆಕ್ಕದಲ್ಲಿ ಪೂರ್!





ಎಷ್ಟು  ದಿನಗಳಾಯಿತು ನಿನ್ನ ಕಂಡು ?
ಮತ್ತದೇ ಪ್ರಶ್ನೆ ನನ್ನ ಮನದಲ್ಲಿ.. ಮರೆತೆಯಾ ಗೆಳೆಯಾ? ಪ್ರತಿದಿನ ಪ್ರತಿ ಕ್ಷಣ ನಾನು ಇಂತಹ ಹುಚ್ಚು ಪ್ರಶ್ನೆಗಳನ್ನು ಕೇಳುತ್ತಾ ತಲೆ ಬಿಸಿ ಮಾಡ್ತಾ ಇದ್ದೆ.. ಯಾಕೋ ಒಂದೊಂದು ಗಳಿಗೆಯೂ ನೀನಿಲ್ಲದೆ ವ್ಯರ್ಥ ಎನ್ನುವ ಹುಚ್ಚು ಸ್ವಾರ್ಥ ನನ್ನದು. ಆದರೆ ಸದಾ ನಾನು ನಿನ್ನ ಬಳಿ ಇರಬೇಕು ಎನ್ನುವ ಆಸೆ ಪ್ರಪಂಚದ ಕೆಟ್ಟ ಆಸೆಗಳ ಸಾಲಿಗೆ ಸೇರಿಲ್ಲ ಬಿಡು ಅತ್ತ!..
ಹೌದು ನಮ್ಮ ಮೊದಲ ಭೇಟಿಯ ಕಾಲವು ಈಗಾಗಲೇ ಹಲವಾರು ವಸಂತಗಳನ್ನು ಕಂಡಿವೆ. ಆದರೂ ಆ ಹಳೆಯ ಮಧುರ ನೆನಪು ಮಾತ್ರ ಜೀವಂತ.. ನನ್ನ ಹಸಿರು ಚೂಡಿ ನಿನ್ನ ಆಕಾಶ ನೀಲಿ ಜುಬ್ಬ ಎರಡರ ಸಮಾಗಮ ಬೆಚ್ಚನೆಯ ಅಪ್ಪುಗೆಯಲ್ಲಿ..! ಹೌದು ನಾವು ಭೇಟಿ ಆದ ಮೊದಲ ದಿನ ಇವತ್ತಿಗೆ ಅದೆಷ್ಟು ಕಾಲವಾಯ್ತು ಲೆಕ್ಕದ ಪ್ರಕಾರ?..ಸಾರಿ ಕಣೊ ಹುಡುಗ ನನಗೆ ಲೆಕ್ಕಾಚಾರ ಹೆಚ್ಚು ಗೊತ್ತಿಲ್ಲ.. ಏನೇ ಆದರೂ ಅದು ಲೆಕ್ಕಕ್ಕೆ ಸಿಲುಕದಷ್ಟು .. ಹಾಗೆ ನಿನ್ನ ತಲೆ ತಿಂದದ್ದು  ಲೆಕ್ಕವಿಲ್ಲದಷ್ಟು, ಬೇಸರಿಸಿದ್ದು, ಮುದ್ದಿಸಿದ್ದು.. ಕಡೆಗೆ ಜಗಳವಾಡಿದ್ದು ಸಹ ಲೆಕ್ಕವಿಲ್ಲದಷ್ಟು.. ಎಲ್ಲವನ್ನು ಸಹಿಸಿದೆ ನೀನು ನನ್ನ ಲೆಕ್ಕವಿಲ್ಲದಷ್ಟು ಪ್ರೀತಿಗಾಗಿ..!!
ಲೆಕ್ಕದಲ್ಲಿ ತುಂಬಾ ಪೂರ್ ಕಣೊ ನಾನು .. ಹಾಗೆ ಬದುಕಿನಲ್ಲಿಯೂ ವೆರಿ ಪೂರ್ .. ನಾವು ಭೇಟಿ ಆಗಿ ಅದಾಗಲೇ ವರ್ಷಗಳೇ ಉರುಳಿವೆ.. ಅಂದು ಭೇಟಿ ಆದ ಬಳಿಕ ನಿನ್ನ ನೋಡಲೇ ಇಲ್ಲ ನಾನು .. ನಿನಗೆ ನನ್ನ ನೆನಪು ಉಳಿದಿದೆಯಾ ಎಂದು ಪ್ರಶ್ನಿಸಲು ನೀ ಬಿಟ್ಟು ಹೋಗಿಯಾಗಿದೆ ಅವಳ ಕೈ ಹಿಡಿದು..!
ಲೆಕ್ಕದಲ್ಲಿ ತುಂಬಾ ಪೂರ್ ನಾನು ಅದೆಷ್ಟು ಕಾಲವಾಗಿದೆ ನಿನ್ನ ನೋಡಿ ನಿನಗೇನಾದರೂ ನೆನಪಿದೆಯಾ ದೊರೆ..? ಅದೆಷ್ಟು ಕಾಲವಾಗಿದೆ ನಾ ಬದುಕ ಕಳೆದುಕೊಂಡು?  ನಿನ್ನ ಭಿತ್ತಿಯಲ್ಲಿ ಅದು ಹುದುಗಿದೆಯಾ ಗೆಳೆಯಾ? ಹೇಳು ಪ್ಲೀಸ್ ನಾನು ಲೆಕ್ಕದಲ್ಲಿ ತುಂಬಾ ಪೂರ್ ಹಾಗೆ ಬದುಕಿನಲ್ಲೂ !

1 comment:

  1. "ನಾನು ಲೆಕ್ಕದಲ್ಲಿ ತುಂಬಾ ಪೂರ್ ಹಾಗೆ ಬದುಕಿನಲ್ಲೂ !" ಎಂತಹ ವಿಷಾದದ ಮಾತು ಗೆಳತಿ? ಯಾರದೋ ಕೈ ಹಿಡಿದು ಕಳಚಿಕೊಂಡ ನಲ್ಲನ ನೆನಪಿನ್ನೂ ಕಾಡುತ್ತಲೇ ಇರುತ್ತದೆ ಬದುಕೆಲ್ಲ ಅಂಗೈನ ಹುಣ್ಣಿನಂತೆ!

    ReplyDelete

Followers