Wednesday, 29 January 2014

ಪುಟ್ಟ ಗೆಳೆಯ


ಪ್ರೀತಿಯ ಪುಟ್ಟ ಗೆಳೆಯ,
ಮತ್ತೆ ನಾನು ಹೇಳುವ ಮಾತುಗಳು ನನ್ನಲ್ಲೇ ಉಳಿದು ಬಿಡ್ತಾ ಇದೆ ಅಂತ ಅನ್ನಿಸುತ್ತಿದೆ ಗೆಳೆಯಾ.. ಗೊತ್ತಿಲ್ಲ ಯಾಕೆ ಹೀಗಾಗಿದೆ ಅಂತ. ವಯಸ್ಸಿನಲ್ಲಿ ನೀನು ತುಂಬಾ ಚಿಕ್ಕವನು. ಆದರೆ ನೀನು ಅದ್ಯಾಕೆ ನನ್ನ ಬಗ್ಗೆ ಈ ಪರಿಯ ಆಸಕ್ತಿ ತೋರಿಸ್ತಾ ಇದ್ದೀಯ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನಿನ್ನ ಸಾಂಗತ್ಯದ ಮಧುರವಾದ ನೆನಪಲ್ಲಿ ನನಗೆ ಒಮ್ಮೊಮ್ಮೆ ಆಗುವ ಬೇಸರಕ್ಕೆ  ಖಂಡಿತಾ ನೀನಲ್ಲ. ಮನದಲ್ಲಿ ಹುದುಗಿರುವ  ಕಹಿ ನೆನಪುಗಳು ಆಗಾಗ ಕದಡುವಂತೆ ಮಾಡುವ ನನ್ನ ಬದುಕಿನ ಭಾವಭಿತ್ತಿಯಲ್ಲಿ ಅಡಗಿರುವ ನೋವಿನ ಮೂಟೆಯನ್ನು ಬಿಚ್ಚಿ ಹೇಳುವ ತವಕ ನನಗಿಲ್ಲ.
ಮದುವೆ ಕನಸ ಬಿಟ್ಟು ದೂರ ಉಳಿದವಳಿಗೆ ಈಗ ಮತ್ತೆ ವಸಂತವಾಗುವ, ಹಸಿರಾಗುವ , ಚಿಗುರಾಗುವ ಹಂಬಲವಿಲ್ಲ  . ನಿನ್ನ ಹಟವ ನಾ ಬಲ್ಲೆ. ಇದು ತಪ್ಪಲ್ಲ! ಆದರೆ ಯಾವುದು ಸ್ವೀಕರಿಸಲು ಮನವಿಲ್ಲದ ನನಗೆ ಮತ್ತೆ ಹೊಸ ಬದುಕಿನ ಬಗ್ಗೆ ಆಸೆಯಿಲ್ಲ. ಬೇಡ ಅನ್ನಿಸುವ ಬೇಕುಗಳು, ಬೇಕೇ ಬೇಕು ಎನ್ನುವ ಆಶಯಗಳು ಎಲ್ಲವನ್ನು ನಾನು ಹೇಳುವ ಹಾಗಿಲ್ಲ.. ಅರ್ಥ ಮಾಡುವ ತಾಖತ್ತು ನನ್ನಲ್ಲಿ ಉಳಿದಿಲ್ಲ. ಅದಕ್ಕೆ ವಯಸ್ಸಾದ ನೆಪವಿಟ್ಟು ಬದುಕ ನಡೆಸುತ್ತಿದ್ದೇನೆ. ಮರೆತು ಬಿಡು ಪುಟ್ಟ ಗೆಳೆಯ.. ಬದುಕು ದೊಡ್ಡದು.. ನಿನ್ನ ದಾರಿ ದೊಡ್ಡದು. ಅಲ್ಲಿ ನಿನ್ನ  ಭರವಸೆ ಇದೆ.. ನಾನು ಎಂದಿಗೂ  ಕೆತ್ತಲಾಗದ ಕಲ್ಲು.. ಬರೆಯಲಾಗದ ಹಾಳೆ..
.........
ಗೆಳತಿ !

Monday, 27 January 2014

ಈ ಸಂಬಂಧಕ್ಕೇನು ಹೆಸರು ?




ಪ್ರೀತಿಯ ಹುಡುಗಾ, 
ಕೆಲವು ಸಂಬಂಧಗಳು ಹಾಗೆ ಕಣೋ ಚಿನ್ನ ಹೇಳೋಕೆ ಆಗಲ್ಲ, ಇನ್ನು ಅದನ್ನು ಬಿಡಿಸಿಡುವ ಪ್ರಯತ್ನ ಮಾಡೋಕೆ ಹೋದರೆ ಸಿಕ್ಕೋದು ಬಿಡಿಸಲಾಗದ ಸಿಕ್ಕು, ಅರ್ಥವಾಗದ ಸಂಗತಿಗಳು.. ನನ್ನ ಮುದ್ದು ಹುಡುಗ  ಇದನ್ನು ಯಾವ ಲೇಖಕ ಹೇಗೆ ಬೇಕಾದರೂ ಕರಿಯಲಿ, ಮದುವೆಯಾಚಿಗಿನ ಸಂಬಂಧ  , ಮದುವೆ ನಂತರದ ಬಾಂಧವ್ಯ, ಅದರಾಚೆ ಇರುವ ಕೊಂಡಿ ಯಾವುದೇ ಆಗಿರಲಿ ಆದರೆ ಇದರ ಅರ್ಥವೂ ನನಗೂ- ನಿನಗೂ ಗೊತ್ತಿದ್ದರೆ ಸಾಕು ಕಣೋ ದಡ್ಡ. ಇಲ್ಲಿ ನಮಗೆ ಆಕರ್ಷಣೆ ಇದ್ದರು ಅದು ದೇಹದ್ದಲ್ಲ  ಎನ್ನುವುದು ಸ್ಪಷ್ಟ. ಯಾಕೆಂದರೆ ನೀನು ಸಂತೃಪ್ತ ಕುಟುಂಬದ ಯಜಮಾನ, ನಾನು ಅಷ್ಟೇ. ಆದರು ಮನದಲ್ಲಿ ಬೇರೂರಿದ ಆ ಕೊರತೆಯ ಕಠೋರತೆಗೆ ಬೆಚ್ಚಿ ಬಯಸುವ ಸಾಂಗತ್ಯವನ್ನು ವಿಚಿತ್ರ ಸಂಬಂಧ ಎಂದು ಅರ್ಥೈಸುವುದು ಎಷ್ಟು ಸರಿ? ನನ್ನ ಖಾಲಿ ಹಾಳೆಯ ಅಕ್ಷರ ನೀನು, ನಿನ್ನ ಕವನಗಳ ಜೀವ ನಾನು. ನಗು ಬರುತ್ತೆ ಅಲ್ವಾ ಇಂತಹ ವೈಪರಿತ್ಯ ನೋಡಿದರೆ.. ಗೆಳೆಯಾ ನಿನ್ನನ್ನು ನಾನು ಪ್ರೀತಿಯಿಂದ ಹುಡುಗಾ ಅಂತ ಕರೀತೀನಿ. ಯಾಕೆಂದ್ರೆ ನೀನು ನನ್ನ ಬಾಲ್ಯದ ಕಳೆದು ಹೋದ ಕನಸು, ನಾ ನಿನ್ನ ಬದುಕಿನ  ನಿರಂತರ ಭಾವಲಹರಿ. ಹರಿದ ಕನಸುಗಳು, ಛಿದ್ರವಾದ ಮನಸುಗಳು, ಒಡೆದ ಕಥೆಗಳ ನಡುವೆ ನಾವಿಬ್ಬರು ಇನ್ನು ಬದುಕಿದ್ದೇವೆ ಅಂದರೆ ಪ್ರಾಯಶಃ  ನೀ ನನಗೆ ಮತ್ತು ನಾ ನಿನಗೆ ಸಿಕ್ಕುವ  ಸಾಧ್ಯತೆಗಳು ಇತ್ತು ಎಂದು ಕಾಣುತ್ತದೆ. ಅದೆಷ್ಟು ದಿನಗಳಿಂದ ಕಾದಿದ್ದೆ ನನಗಾಗಿ.. ಹಾಗೆ ನಾ ನಿನಗಾಗಿ. ಎಲ್ಲೆ ಮೀರುವ- ಎಲ್ಲೂ ಮೀರದ ಪ್ರೀತಿಯ ಒಡನಾಟದ ಸಖ್ಯ ಅದೆಷ್ಟು ಹಿತಾನುಭವ ಇಬ್ಬರಿಗೂ ಅಲ್ವಾ?  ಹೇಳು ಎನ್ನರಸ. ! ಮದುವೆ ಮಕ್ಕಳು, ದಾಪತ್ಯ, ಜಂಜಾಟ ಇವೆಲ್ಲದರ ನಡುವೆ ಹಾಯಿ ಗಾಳಿ ತಂಗಾಳಿಯಾಗಿ ನೀ ಸಿಕ್ಕೆ ಅಂದರೆ ಪೂರ್ವಜನ್ಮದ ಮೇಲೆ ನನಗೆ ಸಿಕ್ಕಾಪಟ್ಟೆ ನಂಬಿಕೆ ಆಗ್ತಾ ಇದೆ. ಅಲ್ಲಿ ನಾ-ನೀ ಏನಾಗಿರ ಬಹುದು, ತಾಯಿ ಮಗ, ತಂದೆ ಮಗಳು, ಗೆಳೆಯ ಗೆಳತಿ, ಅಪೂರ್ಣವಾದ ಪ್ರೆಅಮ ಜೀವಗಳು, ಗಂಡ ಹೆಂಡತಿ, ಅಪರೂಪದ ಪ್ರೇಯಸಿ-ಪ್ರಿಯಕರ. ಮನುಷ್ಯರೇ ಆಗ ಬೇಕು ಎಂದೇನು ಇಲ್ಲ ಜಕ್ಕವಕ್ಕಿಗಳು, ತರುಲತೆ, ಹೂ ಬಳ್ಳಿ, ಏನು ಏನೆಂಬ ಪ್ರಶ್ನೆ ಉತ್ತರ ಹುಡುಕುತ್ತ ಕೂರುವ ಬದಲು, ಇರುವಷ್ಟು ಸಮಯ ಖುಷಿಯಾಗಿರೋಣ ಚೆನ್ನ.. ನನ್ನ ಚಿನ್ನ ಏನಂತೀಯ ? 
ಇಂತಿ 
ನಿನ್ನವಳಾ ?   

Sunday, 19 January 2014

ನೆಪ !



ಹೆಚ್ಚೇನೂ ಮಾತುಗಳಿಲ್ಲ
ನಿನಗೆ ತಿಳಿಸಲು ಗೆಳೆಯಾ 
ಆದರೂ ಅತಿ... 
ಹೆಚ್ಚು ಭಾವನೆಗಳ
ತಿಳಿಸುವ ಬಯಕೆ!
ಆಸೆಗೆ ಮಿತಿಯಿಲ್ಲ
ನಿಜ!
ಹಾಗೆಂದು ಇದ್ದು ಬಿಡಲು 
ಒಲ್ಲದು ಈ ಮನ 
ಬದುಕಿನ ಮಜಲುಗಳ
ಗೋಜಲಲ್ಲಿ ಕಾಡುವ 
ಹನಿಹನಿಯ ನೆನಪು
ನಿನ್ನ ನೆನಪಿಸಿಕೊಳ್ಳಲು 
ಮಾಡುವ ಒಂದು 
ಕುಂಟು ನೆಪ !

Followers