ಪ್ರೀತಿಯ ಹುಡುಗಾ,
ಕೆಲವು ಸಂಬಂಧಗಳು ಹಾಗೆ ಕಣೋ ಚಿನ್ನ ಹೇಳೋಕೆ ಆಗಲ್ಲ, ಇನ್ನು ಅದನ್ನು ಬಿಡಿಸಿಡುವ ಪ್ರಯತ್ನ ಮಾಡೋಕೆ ಹೋದರೆ ಸಿಕ್ಕೋದು ಬಿಡಿಸಲಾಗದ ಸಿಕ್ಕು, ಅರ್ಥವಾಗದ ಸಂಗತಿಗಳು.. ನನ್ನ ಮುದ್ದು ಹುಡುಗ ಇದನ್ನು ಯಾವ ಲೇಖಕ ಹೇಗೆ ಬೇಕಾದರೂ ಕರಿಯಲಿ, ಮದುವೆಯಾಚಿಗಿನ ಸಂಬಂಧ , ಮದುವೆ ನಂತರದ ಬಾಂಧವ್ಯ, ಅದರಾಚೆ ಇರುವ ಕೊಂಡಿ ಯಾವುದೇ ಆಗಿರಲಿ ಆದರೆ ಇದರ ಅರ್ಥವೂ ನನಗೂ- ನಿನಗೂ ಗೊತ್ತಿದ್ದರೆ ಸಾಕು ಕಣೋ ದಡ್ಡ. ಇಲ್ಲಿ ನಮಗೆ ಆಕರ್ಷಣೆ ಇದ್ದರು ಅದು ದೇಹದ್ದಲ್ಲ ಎನ್ನುವುದು ಸ್ಪಷ್ಟ. ಯಾಕೆಂದರೆ ನೀನು ಸಂತೃಪ್ತ ಕುಟುಂಬದ ಯಜಮಾನ, ನಾನು ಅಷ್ಟೇ. ಆದರು ಮನದಲ್ಲಿ ಬೇರೂರಿದ ಆ ಕೊರತೆಯ ಕಠೋರತೆಗೆ ಬೆಚ್ಚಿ ಬಯಸುವ ಸಾಂಗತ್ಯವನ್ನು ವಿಚಿತ್ರ ಸಂಬಂಧ ಎಂದು ಅರ್ಥೈಸುವುದು ಎಷ್ಟು ಸರಿ? ನನ್ನ ಖಾಲಿ ಹಾಳೆಯ ಅಕ್ಷರ ನೀನು, ನಿನ್ನ ಕವನಗಳ ಜೀವ ನಾನು. ನಗು ಬರುತ್ತೆ ಅಲ್ವಾ ಇಂತಹ ವೈಪರಿತ್ಯ ನೋಡಿದರೆ.. ಗೆಳೆಯಾ ನಿನ್ನನ್ನು ನಾನು ಪ್ರೀತಿಯಿಂದ ಹುಡುಗಾ ಅಂತ ಕರೀತೀನಿ. ಯಾಕೆಂದ್ರೆ ನೀನು ನನ್ನ ಬಾಲ್ಯದ ಕಳೆದು ಹೋದ ಕನಸು, ನಾ ನಿನ್ನ ಬದುಕಿನ ನಿರಂತರ ಭಾವಲಹರಿ. ಹರಿದ ಕನಸುಗಳು, ಛಿದ್ರವಾದ ಮನಸುಗಳು, ಒಡೆದ ಕಥೆಗಳ ನಡುವೆ ನಾವಿಬ್ಬರು ಇನ್ನು ಬದುಕಿದ್ದೇವೆ ಅಂದರೆ ಪ್ರಾಯಶಃ ನೀ ನನಗೆ ಮತ್ತು ನಾ ನಿನಗೆ ಸಿಕ್ಕುವ ಸಾಧ್ಯತೆಗಳು ಇತ್ತು ಎಂದು ಕಾಣುತ್ತದೆ. ಅದೆಷ್ಟು ದಿನಗಳಿಂದ ಕಾದಿದ್ದೆ ನನಗಾಗಿ.. ಹಾಗೆ ನಾ ನಿನಗಾಗಿ. ಎಲ್ಲೆ ಮೀರುವ- ಎಲ್ಲೂ ಮೀರದ ಪ್ರೀತಿಯ ಒಡನಾಟದ ಸಖ್ಯ ಅದೆಷ್ಟು ಹಿತಾನುಭವ ಇಬ್ಬರಿಗೂ ಅಲ್ವಾ? ಹೇಳು ಎನ್ನರಸ. ! ಮದುವೆ ಮಕ್ಕಳು, ದಾಪತ್ಯ, ಜಂಜಾಟ ಇವೆಲ್ಲದರ ನಡುವೆ ಹಾಯಿ ಗಾಳಿ ತಂಗಾಳಿಯಾಗಿ ನೀ ಸಿಕ್ಕೆ ಅಂದರೆ ಪೂರ್ವಜನ್ಮದ ಮೇಲೆ ನನಗೆ ಸಿಕ್ಕಾಪಟ್ಟೆ ನಂಬಿಕೆ ಆಗ್ತಾ ಇದೆ. ಅಲ್ಲಿ ನಾ-ನೀ ಏನಾಗಿರ ಬಹುದು, ತಾಯಿ ಮಗ, ತಂದೆ ಮಗಳು, ಗೆಳೆಯ ಗೆಳತಿ, ಅಪೂರ್ಣವಾದ ಪ್ರೆಅಮ ಜೀವಗಳು, ಗಂಡ ಹೆಂಡತಿ, ಅಪರೂಪದ ಪ್ರೇಯಸಿ-ಪ್ರಿಯಕರ. ಮನುಷ್ಯರೇ ಆಗ ಬೇಕು ಎಂದೇನು ಇಲ್ಲ ಜಕ್ಕವಕ್ಕಿಗಳು, ತರುಲತೆ, ಹೂ ಬಳ್ಳಿ, ಏನು ಏನೆಂಬ ಪ್ರಶ್ನೆ ಉತ್ತರ ಹುಡುಕುತ್ತ ಕೂರುವ ಬದಲು, ಇರುವಷ್ಟು ಸಮಯ ಖುಷಿಯಾಗಿರೋಣ ಚೆನ್ನ.. ನನ್ನ ಚಿನ್ನ ಏನಂತೀಯ ?
ಇಂತಿ
ನಿನ್ನವಳಾ ?
ಕೆಲ ಸಂಬಂಧಗಳು ಹೆಸರಿಗೆ ಸಿಗದ ಭಾವಗಳು. ನೂರು ನೋವುಗಳನ್ನು ಸಂತೈಸಬಲ್ಲದು 'ಆ' ಒಂದು ಬುಜದ ಆಸರೆ. ನೂರಾನೆ ಬಲವನ್ನೂ ಬದುಕುವ ಛಲವನ್ನೂ ಪ್ರೇರೇಪಿಸುವುದು ಅಂತಹ ದೈವೀ ಬಂಧನ.
ReplyDeletehighlight :
"ಮನುಷ್ಯರೇ ಆಗ ಬೇಕು ಎಂದೇನು ಇಲ್ಲ ಜಕ್ಕವಕ್ಕಿಗಳು, ತರುಲತೆ, ಹೂ ಬಳ್ಳಿ..." ವಾರೇವ್ಹಾ...